Advertisement

ಬಿಡಾಡಿ ದನಗಳ ಹಾವಳಿ ತಡೆಗಟ್ಟಿ

01:01 PM Jul 18, 2019 | Naveen |

ಚಿಕ್ಕೋಡಿ: ಶೈಕ್ಷಣಿಕ ಜಿಲ್ಲಾ ಕೇಂದ್ರ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳದಲ್ಲಿಯೇ ಕಾದಾಟಕ್ಕೆ ಇಳಿದು ಜನರಿಗೆ ತೊಂದರೆಯುಂಟು ಮಾಡುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ತೊಂದರೆ ಉಂಟಾಗುತ್ತಿದೆ.

Advertisement

ನಗರದ ಬಸ್‌ ನಿಲ್ದಾಣ ಮುಂಭಾಗ, ಎನ್‌ಎಂ ರಾಜ್ಯ ಹೆದ್ದಾರಿ, ಕಿತ್ತೂರ ರಾಣಿ ಚನ್ನಮ್ಮ ರಸ್ತೆ ಹಾಗೂ ಪ್ರಮುಖ ಬೀದಿಗಳಲ್ಲಿ ನೂರಾರು ಬಿಡಾಡಿ ದನಗಳು ರಾಜಾರೋಷವಾಗಿ ರಸ್ತೆ ಮಧ್ಯೆದಲ್ಲಿಯೇ ಓಡಾಡುತ್ತಿರುತ್ತವೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕಣ್ಣು ಮುಚ್ಚಿ ಕುಳಿತಿದೆ. ಬಿಡಾಡಿ ದನಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕೆಂದು ಪೊಲೀಸ್‌ ಇಲಾಖೆ ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ವ್ಯಾಪಾರಸ್ಥರಿಗೆ ಕಷ್ಟ: ನಗರದ ಹೃದಯ ಭಾಗದಲ್ಲಿರುವ ಕಿತ್ತೂರ ಚನ್ನಮ್ಮ ರಸ್ತೆಯ ಪಕ್ಕದಲ್ಲಿ ವ್ಯಾಪಾರಸ್ಥರು ಹಣ್ಣು, ಹಂಪಲು, ತರಕಾರಿ ಮಾರಾಟಕ್ಕೂ ಬಿಡಾಡಿ ದನಗಳಿಂದ ತೀವ್ರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವ್ಯಾಪಾರಸ್ಥರು ಖರೀದಿಸಿ ಮಾರಾಟಕ್ಕೆ ಇಟ್ಟ ಹಣ್ಣು ಮತ್ತು ತರಕಾರಿ ಚೀಲಕ್ಕೆ ಬಾಯಿ ಹಾಕಿ ರಸ್ತೆಯ ತುಂಬ ಚೆಲ್ಲಾಪಿಲ್ಲಿಯಾಗಿ ಬಿಸಾಡುತ್ತಿವೆ. ಕೆಲವೊಂದು ಅಂಗಡಿಗಳಲ್ಲಿಯೇ ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡುವ ದೃಶ್ಯ ಸಾಮಾನ್ಯವಾಗಿದೆ.

ಶಾಲಾ ಮಕ್ಕಳಿಗೆ ಸಂಕಷ್ಟ: ಸಾರ್ವಜನಿಕ ವಲಯ ಮಾತ್ರವಲ್ಲದೆ ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ ಬಿಡಾಡಿ ದನಗಳಿಂದ ಹೆಚ್ಚಿನ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಚಿಕ್ಕ ಮಕ್ಕಳು ಶಾಲೆಗೆ ಹೋಗಿ ಬರಲು ಪೋಷಕರನ್ನು ಅವಲಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಭಯ ಪಡುವದರಿಂದ ಪಾಲಕರು ಪುರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪೊಲೀಸ್‌ ಇಲಾಖೆ ಪತ್ರಕ್ಕೆ ಸ್ಪಂದಿಸದ ಪುರಸಭೆ: ಚಿಕ್ಕೋಡಿ ನಗರದ ಮಧ್ಯೆ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಇಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಬಿಡಾಡಿ ದನಗಳು ರಸ್ತೆ ಮಧ್ಯೆದಲ್ಲಿ ಓಡಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮತ್ತು ಸಾಕಷ್ಟು ದ್ವಿಚಕ್ರವಾಹನ ಸವಾರರು ಅಪಘಾತಗಿಡ್ಡಾಗಿದ್ದಾರೆ. ಇದನ್ನು ಮನಗಂಡ ಪೊಲೀಸ್‌ ಇಲಾಖೆ ದನಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕೆಂದು ಪುರಸಭೆಗೆ ಸಾಕಷ್ಟು ಬಾರಿ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ. ಆದರೂ ಸಹ ಪುರಸಭೆ ಅಧಿಕಾರಿಗಳು ಬಿಡಾಡಿ ದನಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸದ ಸಂಗತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next