ಚಿಕ್ಕೋಡಿ: ಕೆಎಲ್ ಇ ಸಂಸ್ಥೆಯ ಮೂಲಕ ಇಡೀ ರಾಜ್ಯದಲ್ಲಿ ಛಾಪು ಮೂಡಿಸಿರುವ ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಪುತ್ರ ಅಮಿತ್ ಕೋರೆ ಅವರಿಗೆ ಚಿಕ್ಕೋಡಿ ಅಥವಾ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕೆಂದು ಕೋರೆ ಅಭಿಮಾನಿ ಬಳಗ ಬಿಜೆಪಿ ಹೈಕಮಾಂಡ್ ಗೆ ಮನವಿ ಮಾಡಿದೆ.
ತಾಲೂಕಿನ ಅಂಕಲಿ ಗ್ರಾಮದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕೋರೆ ಅಭಿಮಾನಿ ಬಳಗದ ಸುರೇಶ ಪಾಟೀಲ್, ಭರತೇಶ ಬನವಣೆ ಸೇರಿದಂತೆ ಇನ್ನಿತರರು ಅಮಿತ್ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕೆಂದು ಆಗ್ರಹಿಸಿದರು. ಅಮಿತ್ ಕೋರೆ ಕಳೆದ 25 ವರ್ಷಗಳಿಂದ ಸಹಕಾರ.ಶಿಕ್ಷಣ ಮತ್ತು ಕೈಗಾರಿಕೊದ್ಯಮದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಗಡಿ ಭಾಗದ ರಾಯಬಾಗ ಮತ್ತು ಚಿಕ್ಕೋಡಿ ಭಾಗದಲ್ಲಿ ಒಂದು ಖಾಸಗಿ ಹಾಗೂ ಒಂದು ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಡೆಸುತ್ತಿರುವ ಅಮಿತ್ ಅವರು ಗಡಿ ಭಾಗದ ಸಾವಿರಾರು ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದರು.
ಅಮಿತ್ ಕೋರೆಯವರ ತಂದೆ ಡಾ.ಪ್ರಭಾಕರ ಕೋರೆ ಅವರು ಕಳೆದ 40 ವರ್ಷದಿಂದ ರಾಜಕೀಯ. ಸಾಮಾಜಿಕ ರಂಗದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.ಡಾ.ಕೋರೆ ಅವರು ಹೈಕಮಾಂಡ್ ನಾಯಕರ ಜತೆ ನಿಕಟ ಸಂಬಂಧ ಇಟ್ಟುಕೊಂಡಿದ್ದಾರೆ. ಅಮಿತ್ ಕೋರೆ ಅವರಿಗೆ ಟಿಕೆಟ್ ನೀಡಬೇಕೆಂದು ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದ ಜನರ ಒಲುವು ಇದೆ.ಅಮಿತ ಕೋರೆ ಅವರಿಗೆ ಟಿಕೆಟ್ ಕೇಳಬೇಕೋ ಬೇಡವೋ ಎಂಬುದರ ಕುರಿತಾಗಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪ್ರತಿಯೊಬ್ಬ ಮುಖಂಡರಿಗೆ ಭೇಡಿ ನೀಡಿದಾಗ ಒಳ್ಳೆಯ ಮತ್ತು ಮೃದುಸ್ವಭಾವದ ವ್ಯಕ್ತಿತ್ವ ಹೊಂದಿರುವ ಅಮಿತ ಅವರು ಬಿಜೆಪಿಯ ಸೂಕ್ತ ಅಭ್ಯರ್ಥಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುರೇಶ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಭರತೇಶ ಬನವಣೆ, ಮಹಾಂತೇಶ ಪಾಟೀಲ ಮುಂತಾದವರು ಇದ್ದರು.