Advertisement

Chikkodi: ಸೈಕಲ್ ಸವಾರಿ ಮೂಲಕ ಆರೋಗ್ಯ- ಸಂಚಾರಿ ಜಾಗೃತಿ ಮೂಡಿಸುವ ಉಪವಿಭಾಗಾಧಿಕಾರಿ

06:16 PM Sep 20, 2023 | Team Udayavani |

ಚಿಕ್ಕೋಡಿ: ಉಪವಿಭಾಗೀಯ ದಂಡಾಧಿಕಾರಿಯೊಬ್ಬರಿಗೆ ಸರ್ಕಾರಿ ವಾಹನ ಮತ್ತು ಅವರ ಜೊತೆ ನಾಲ್ಕೈದು ಜನ ಕೆಳಸ್ಥರದ ನೌಕರ ವರ್ಗ ಜೊತೆಯಲ್ಲಿದ್ದುಕೊಂಡು ಜನರ ಸಮಸ್ಯೆ ಆಲಿಸುವುದು ವಾಡಿಕೆ.

Advertisement

ಆದರೆ ಚಿಕ್ಕೋಡಿ ಮಾಧವ ಗಿತ್ತೆ(ಐಎಎಸ್) ಎಂಬ ಉಪವಿಭಾಗೀಯ ಅಧಿಕಾರಿ ಅವರು ಸೈಕಲ್ ಸವಾರಿ ಮೂಲಕ ಜನರ ಸಮಸ್ಯೆ ಆಲಿಸುವುದರ ಜೊತೆಗೆ ಸ್ವಯಂ ಆರೋಗ್ಯ ಕಾಳಜಿ ವಹಿಸಿ ಯುವ ಸಮುದಾಯಕ್ಕೆ ಮಾದರಿಯಾಗುತ್ತಿದ್ದಾರೆ.

ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿ ಮಾಧವ ಗಿತ್ತೆ ಒಬ್ಬ ಕಡಕ್ ಅಧಿಕಾರಿ. ಚಿಕ್ಕೋಡಿ ಉಪವಿಭಾಧಿಕಾರಿಯಾದ ಬಳಿಕ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಕಟ್ಟುನಿಟ್ಟಿನ ಆಡಳಿತ ನಡೆಸುವಲ್ಲಿ ದಾಡಸಿತನ ಮೆರೆಯುತ್ತಿದ್ದಾರೆ. ಸಾರ್ವಜನಿಕರ ಕೆಲಸ ಕಾರ್ಯದಲ್ಲಿ ಆಲಿಸಿತನ ಮಾಡುವ ನೌಕರರಿಗೆ ಜನರ ಮುಂದೆ ಬಿಸಿ ಮುಟ್ಟಿಸುವ ಕೆಲಸ ಮಾಡಿ ಹೆಸರುವಾಸಿಯಾಗಿದ್ದಾರೆ.

ಪ್ರತಿನಿತ್ಯ ಪ್ರತಿಯೊಬ್ಬರು ವ್ಯಾಯಾಮದೊಂದಿಗೆ ವಾಕಿಂಗ್ ಮಾಡಿ ಸ್ವಯಂ ಆರೋಗ್ಯ ಹೊಂದುತ್ತಾರೆ. ಆದರೆ ಐಎಎಸ್ ಅಧಿಕಾರಿ ಮಾಧವ ಗಿತ್ತೆ ಚಿಕ್ಕೋಡಿಯಿಂದ 20 ಕಿ.ಮೀ ಸೈಕಲ್ ಸವಾರಿ ಮಾಡಿ ಸ್ವಯಂ ಆರೋಗ್ಯ ಕಾಳಜಿ ವಹಿಸುವತ್ತ ಗಮನ ಹರಿಸುತ್ತಿದ್ದಾರೆ.

ಪ್ರತಿದಿನ ಒಂದೊಂದು ಕಡೆ ಪ್ರಯಾಣ ಮಾಡುವ ಅವರು ಹಳ್ಳಿಯಲ್ಲಿರುವ ಜನರ ಸಮಸ್ಯೆ ಕೂಡಾ ಆಲಿಸಿ ಜನರ ಮುಂದೆಯೇ ಸಮಸ್ಯೆಗೆ ಪರಿಹಾರ ಒದಗಿಸಿ ಬರುವ ಹವ್ಯಾಸ ಮಾಧವ ಗಿತ್ತೆ ಅವರದ್ದಾಗಿದೆ.

Advertisement

ಮಾಧವ ಗಿತ್ತೆ ಅವರು ಬೆಳಿಗ್ಗೆ 6.30ಕ್ಕೆ ಸೈಕಲ್ ಸವಾರಿ ಮೂಲಕ ತಮ್ಮ ಕರ್ತವ್ಯ ಆರಂಭಿಸುತ್ತಾರೆ. 20 ಕಿ.ಮೀ ವರೆಗೆ ಪ್ರಯಾಣ ಮಾಡಿ ಮಾರ್ಗ‌ ಮಧ್ಯೆ ಇರುವ ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆ ಆಲಿಸುತ್ತಾರೆ.

ಸಮರ್ಪಕ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ ಕಾಮಗಾರಿ, ಸ್ವಚ್ಚತೆ, ಶೌಚಾಲಯ ಮತ್ತು ಸರ್ಕಾರದಿಂದ ಮಂಜೂರಾದ ಮನೆಗಳ ನಿರ್ಮಾಣದ ಕುರಿತು ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಪರಿಹರಿಸುತ್ತಾರೆ.

ಸೈಕಲ್ ಸವಾರಿ ಮಾಡುವ ವೇಳೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸುವ ಅಧಿಕಾರಿಗಳು ಮಕ್ಕಳ ಜೊತೆ ಸಮಾಲೋಚನೆ ನಡೆಸುವ ಕಾರ್ಯ ಮಾಡುತ್ತಾರೆ.‌

ಗುರುವಾರ ಸದಲಗಾ ಪಟ್ಟಣಕ್ಕೆ ಭೇಟಿ ನೀಡಿ ಅಲ್ಲಿಯ ಜನರ ಸಮಸ್ಯೆ ಆಲಿಸಿದ್ದಾರೆ. ಶುಕ್ರವಾರ ನಾಗರಮುನ್ನೋಳ್ಳಿ ಕಡೆ ಪ್ರಯಾಣ ಮಾಡಿ ಅಲ್ಲಿಯ ರೈತರು ಮತ್ತು ಗ್ರಾಮಸ್ಥರ ಜೊತೆ ಚರ್ಚೆ ಮಾಡಿದ್ದಾರೆ.

ಶನಿವಾರ ಚಿಕ್ಕೋಡಿ ತಾಲೂಕಿನ ಶಿಕ್ಷಣ ಕಾಶಿ ಎಂದೇ ಪ್ರಸಿದ್ದಿ ಪಡೆದ ಮಜಲಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಶಾಲೆ-ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲೆಯ ಬಿಸಿಯೂಟ, ಶಾಲಾ ಕೊಠಡಿ ಸ್ಥಿತಿಗತಿ ಕುರಿತು ಮಕ್ಕಳು ಮತ್ತು ಶಾಲಾ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿ ಮಕ್ಕಳಿಗೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

ಸಂಚಾರ ನಿಯಮಗಳ ಜಾಗೃತಿ: ಮಾಧವ ಗಿತ್ತೆ ಸೈಕಲ್ ಏರಿ ಸ್ವಯಂ ಆರೋಗ್ಯ ಕಾಳಜಿ ಪಡೆಯುವುದು ಮಾತ್ರವಲ್ಲದೇ ತಲೆಗೆ ಹೆಲ್ಮೇಟ್ ಧರಿಸಿ ಯುವ ಸಮುದಾಯಕ್ಕೆ ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸುವಲ್ಲಿ ನಿರತರಾಗುತ್ತಾರೆ.

ಯಾರಾದರೂ ಬೈಕ್ ನಲ್ಲಿ ಹೆಲ್ಮೇಟ್ ಇಲ್ಲದೆ ಪ್ರಯಾಣ ಮಾಡುವ ಸವಾರರನ್ನು ತಡೆದು ಹೆಲ್ಮೇಟ್ ಧರಿಸಿ ಸಂಚಾರ ನಿಯಮ ಪಾಲಿಸಬೇಕೆಂದು ಜಾಗೃತಿ ಮೂಡಿಸುತ್ತಾರೆ. ಇಂದಿನ ಅರಾಮದಾಯಕ ಜೀವನ ನಡೆಸುವ ಯುವ ಸಮುದಾಯಕ್ಕೆ ಐಎಎಸ್ ಅಧಿಕಾರಿ ಮಾಧವ ಗಿತ್ತೆ ಸೈಕಲ್ ಸವಾರಿ ಮಾಡಿ ಜನರ ಕುಂದು-ಕೊರತೆ ಆಲಿಸುವುದು ಮಾದರಿಯಗಿದೆ.

ಸೈಕಲ್ ಸವಾರಿ ಮಾಡುವುದರಿಂದ ದೇಹಕ್ಕೆ ಸಾಕಷ್ಟು ವ್ಯಾಯಾಮ ಸಿಗುತ್ತದೆ. ಬೆಳಿಗ್ಗೆ ಉತ್ತಮ ಪರಿಸರ ಸಿಗುತ್ತದೆ. ಸೈಕಲ್ ಸವಾರಿ ಮಾಡುವ ಮಾರ್ಗ‌ ಮಧ್ಯೆ ಹಳ್ಳಿ ಜನರ ಪ್ರೀತಿ-ವಿಶ್ವಾಸ ಸಿಗುತ್ತದೆ. ಹೆಲ್ಮೇಟ್ ಧರಿಸಿದರೆ ನನ್ನ ನೋಡಿ ಹಲವು ಜನ ಹೆಲ್ಮೇಟ್ ಧರಿಸುವ ವಿಶ್ವಾಸ ಇರುತ್ತದೆ. ಹಳ್ಳಿ ಜನರ ಸಮಸ್ಯೆ ಆಲಿಸಲು ಬೆಳಿಗ್ಗೆ ಅವಕಾಶ ಸಿಗುವ ಕಾರಣದಿಂದ ಸೈಕಲ್ ಸವಾರಿ ಮಾಡುತ್ತೇನೆ. –ಮಾಧವ ಗಿತ್ತೆ ಉಪವಿಭಾಗಾಧಿಕಾರಿ ಚಿಕ್ಕೋಡಿ

ಚಿಕ್ಕೋಡಿಯಿಂದ ಮಜಲಟ್ಟಿಯವರಿಗೆ ಸೈಕಲ್ ಸವಾರಿ ಮಾಡಿ ಶಾಲಾ ಮಕ್ಕಳಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸವ ಐಎಎಸ್ ಅಧಿಕಾರಿ ಮಾಧವ ಗಿತ್ತೆ ಕಾರ್ಯ ಶ್ಲಾಘನೀಯ. ಮಾಧವ ಗಿತ್ತೆ ತರಹ ಉಳಿದ ಅಧಿಕಾರಿಗಳು ಹಳ್ಳಿ ಕಡೆ ಬಂದರೆ ಹಳ್ಳಿ ಜನರ ಸಮಸ್ಯೆ ದೂರಾಗುತ್ತವೆ. ಯುವ ಸಮುದಾಯಕ್ಕೆ ಮಾದರಿಯಾಗುತ್ತದೆ.‌  –ರುದ್ರಪ್ಪ ಸಂಗಪ್ಪಗೋಳ ಶಿಕ್ಷಣ ಪ್ರೇಮಿ ಮಜಲಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next