ಚಿಕ್ಕೋಡಿ: ಮೇ 7ರಂದು ನಡೆದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಯುವ ನಾಯಕಿ 27 ವರ್ಷದ ಪ್ರಿಯಾಂಕಾ ಸತೀಶ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ.
Advertisement
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 90,834 ಮತಗಳ ಅಂತರದಿಂದ ಜಯ ಗಳಿಸಿದರು. ಕಾಂಗ್ರೆಸ್-ಬಿಜೆಪಿ ಗೆಲುವಿಗೆ ಭಾರಿ ಕಸರತ್ತು ನಡೆಸಿದ್ದವು. ಅಂತಿಮವಾಗಿ ಮತದಾರರು ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 71,3461 ಮತ ಪಡೆದರೆ, ಪ್ರತಿಸ್ಪರ್ಧಿ ಅಣ್ಣಾಸಾಹೇಬ ಜೊಲ್ಲೆ 6,22,627 ಮತ ಪಡೆದಿದ್ದಾರೆ. ತೀವ್ರ ಸಂಚಲನ ಮೂಡಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ 25,351 ಮತಗಳನ್ನು ಪಡೆಯುವಲ್ಲಿ ಶಕ್ತರಾಗಿದ್ದಾರೆ.
ಬಿಜೆಪಿ 10ನೇ ಸುತ್ತಿನಲ್ಲಿ 1194 ಮತಗಳ ಮುನ್ನಡೆ ಪಡೆಯಿತು. ನಂತರ 17ನೇ ಸುತ್ತಿನಲ್ಲಿ 2406 ಮತಗಳಿಂದ ಮುನ್ನಡೆ ಸಾಧಿಸಿತ್ತು. ಅಂಚೆ ಮತದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು 4459 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 2638 ಮತ ಪಡೆದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಪುರುಷ ಅಭ್ಯರ್ಥಿ ವಿರುದ್ಧ ಮಹಿಳೆ ಗೆಲುವು ಸಾಧಿ ಸಿರುವುದು ಇತಿಹಾಸ. ಈ ಹಿಂದೆ ಏಳು ಬಾರಿ ಸಂಸತ್ ಸದಸ್ಯರಾಗಿದ್ದ ಬಿ.ಶಂಕರಾನಂದ ವಿರುದ್ಧ ರತ್ನಮಾಲಾ ಸವಣೂರ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದರು. ಎರಡನೇ ಬಾರಿಗೆ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶಿಸಿದ್ದಾರೆ.
Related Articles
Advertisement
ಮತ ಎಣಿಕೆ ಕೇಂದ್ರದತ್ತ ಸುಳಿಯದ ಅಭ್ಯರ್ಥಿಗಳುಲೋಕಸಭೆ ಚುನಾವಣೆ ಮತ ಎಣಿಕೆ ಮುಕ್ತಾಯವಾದರೂ ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಬರಲಿಲ್ಲ. ಕಾರ್ಯಕರ್ತರು, ಮಾಧ್ಯಮದವರು ಅವರ ದಾರಿ ಕಾಯ್ದು ಸುಸ್ತಾದರು. ಅಂತಿಮ ಫಲಿತಾಂಶ ಬಂದ ಬಳಿಕ ವಿಜೇತ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಪ್ರಮಾಣ ಪತ್ರ ಪಡೆದರು. ■ ಮಹಾದೇವ ಪೂಜೇರಿ