Advertisement
ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಬುಧವಾರ ನಾಲ್ಕು ಅಡಿಯಷ್ಟು ಏರಿಕೆಯಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಂಗಳವಾರವಷ್ಟೇ ಮೂರು ನದಿಗಳಿಗೆ 14 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಬುಧವಾರ ಮಧ್ಯಾಹ್ನ ಹೊತ್ತಿಗೆ 50 ಸಾವಿರ ಕ್ಯೂಸೆಕ್‌ಗೂ ಜಾಸ್ತಿ ನೀರು ಹರಿದು ಬರುತ್ತಿದೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ನೆರೆಯ ಮಹಾರಾಷ್ಟ್ರದ ಕೋಯ್ನಾ, ಮಹಾಬಳೇಶ್ವರ, ನವಜಾ, ಕಾಳಮ್ಮವಾಡಿ, ರಾಧಾನಗರಿ, ಪಾಟಗಾಂವ ಮತ್ತು ರಾಜ್ಯದ ಗಡಿ ಭಾಗದ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ ಹಾಗೂ ಕಾಗವಾಡ ಭಾಗದಲ್ಲಿ ಕಳೆದ ಎರಡುದಿನಗಳಿಂದ ಧಾರಾಕಾರ ಮಳೆ ಬೀಳುತ್ತಿದೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸೇತುವೆಗಳು ಮುಳುಗಡೆಗೊಂಡಿವೆ. ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ-ಯಡೂರ, ದೂಧಗಂಗಾ ನದಿಯ ಕಾರದಗಾ-ಭೋಜ,
ಮಲಿಕವಾಡ-ದತ್ತವಾಡ, ವೇದಗಂಗಾ ನದಿಯ ಸಿದ್ನಾಳ-ಅಕ್ಕೋಳ, ಭೋಜವಾಡಿ-ಕುನ್ನೂರ, ಬಾರವಾಡ-ಕುನ್ನೂರ ಸೇತುವೆಗಳು
ಮುಳುಗಡೆಗೊಂಡು ರಸ್ತೆ ಸಂಚಾರ ಕಡಿತಗೊಂಡಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 37 ಸಾವಿರ
ಕ್ಯೂಸೆಕ್, ದೂಧಗಂಗಾ ಮತ್ತು ವೇದಗಂಗಾ ನದಿ ಮೂಲಕ 13 ಸಾವಿರ ಕ್ಯೂಸೆಕ್ ನೀರು ಹರಿದು ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೂಡುತ್ತದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಒಟ್ಟು 50 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ಮೂಲಕ 27 ಸಾವಿರ ಕ್ಯೂಸೆಕ್ ನೀರನ್ನು ಆಲಮಟ್ಟಿಗೆ ಹರಿದು ಬಿಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ಮಳೆ ವಿವರ: ಕೋಯ್ನಾ- 247 ಮಿಮೀ, ನವಜಾ-300 ಮಿಮೀ, ಮಹಾಬಲೇಶ್ವರ-304 ಮಿಮೀ,
ವಾರಣಾ-140 ಮಿಮೀ, ಸಾಂಗ್ಲೀ-30 ಮಿಮೀ, ಕೊಲ್ಲಾಪುರ 76 ಮಿಮೀ, ಕಾಳಮ್ಮವಾಡಿ-227 ಮಿಮೀ, ರಾಧಾನಗರ-281 ಮಿಮೀ,
ಪಾಟಗಾಂವ-105 ಮಿಮೀ ಮಳೆಯಾಗಿದೆ. ಚಿಕ್ಕೋಡಿ ತಾಲೂಕು: ಚಿಕ್ಕೋಡಿ-33.6 ಮಿಮೀ, ಅಂಕಲಿ-38.4 ಮಿಮೀ,
ನಾಗರಮುನ್ನೋಳ್ಳಿ-14.4 ಸದಲಗಾ-53 ಮಿಮೀ, ಜೋಡಟ್ಟಿ-13, ನಿಪ್ಪಾಣಿ-40 ಮಿಮೀ, ಸೌಂದಲಗಾ-50 ಮಿಮೀ ಮಳೆ
ಸುರಿದಿದೆ.