ಕನ್ನಡ ಚಿತ್ರರಂಗದಲ್ಲಿ ಕಳೆದೊಂದು ದಶಕದಿಂದ ಹಾಸ್ಯನಟನಾಗಿ ಹಲವು ಚಿತ್ರಗಳಲ್ಲ ಕಾಮಿಡಿ ಕಮಾಲ್ ಮಾಡಿದ್ದ ನಟ ಚಿಕ್ಕಣ್ಣ, ಈಗ ನಾಯಕ ನಟನಾಗಿ ಬಡ್ತಿ ಪಡೆಯುತ್ತಿದ್ದಾರೆ. ಅವರು ನಾಯಕರಾಗಿ ನಟಿಸಿರುವ “ಉಪಾಧ್ಯಕ್ಷ’ ಚಿತ್ರ ಇಂದು ತೆರೆ ಕಾಣುತ್ತಿದೆ.
ಈಗಾಗಲೇ ಟೀಸರ್ ಹಿಟ್ ಆಗುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ. ಸಿನಿಮಾವನ್ನು ಜನ ಇಷ್ಟಪಡುತ್ತಾರೆ ಎಂಬ ನಂಬಿಕೆಯಿಂದ ಚಿಕ್ಕಣ್ಣ ಎದುರು ನೋಡುತ್ತಿದ್ದಾರೆ.
“ಉಪಾಧ್ಯಕ್ಷ’ ಚಿತ್ರದ ಕುರಿತು ಒಂದಷ್ಟು ಮಾತನಾಡಿರುವ ಚಿಕ್ಕಣ್ಣ, “ಇದೊಂದು ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ಆಡಿಯನ್ಸ್‌ಗೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಕೊಡುವಂಥ ಸಿನಿಮಾ ಮಾಡಬೇಕು ಅಂಥ ಈ ಸಿನಿಮಾ ಮಾಡ್ತಿದ್ದೀವಿ. ಅಂದು ಕೊಂಡಂತೆ ಸಿನಿಮಾ ಮೂಡಿ ಬಂದಿದೆ. ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು ಉಪಾಧ್ಯಕ್ಷ ಚಿತ್ರದ ನಾಯಕ ಆದ ಕ್ಷಣದಿಂದ ನೋಡಿದ್ದೇನೆ. ನಾನು ಈ ಚಿತ್ರದ ನಾಯಕ ಅಂದ ಕೂಡಲೇ ಸಾಕಷ್ಟು ಜನ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ. ಆದರೆ ನಿರ್ಮಾಪಕ ಉಮಾಪತಿ ಅವರು ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ’ ಎನ್ನುತ್ತಾರೆ ಚಿಕ್ಕಣ್ಣ.
ಇನ್ನು ಇಲ್ಲಿಯವರೆಗೆ ಯಾವ ಸಿನಿಮಾಗಳಲ್ಲೂ ನೋಡಿರದಂಥ ಡಿಫರೆಂಟ್ ಗೆಟಪ್‌ನಲ್ಲಿ ಚಿಕ್ಕಣ್ಣ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ಚಿಕ್ಕಣ್ಣ, “ಈ ಸಿನಿಮಾದಲ್ಲಿ ನನ್ನ ಗೆಟಪ್ ಚೇಂಜ್ ಮಾಡಿದ್ದಾರೆ. ನನ್ನ ಹೇರ್ ಸ್ಟೈಲ್, ಮ್ಯಾನರಿಸಂ ಎಲ್ಲ ಹೊಸದಾಗಿ ಕಾಣುವಂತೆ ಮಾಡಿದ್ದಾರೆ ನಿರ್ದೇಶಕರು. ಅದು ಆಡಿಯನ್ಸ್‌ಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದರ ಬಗ್ಗೆ ನಾನು ಕೂಡಾ ಕುತೂಹಲದಿಂದ ಇದ್ದೇನೆ’ ಎನ್ನುತ್ತಾರೆ.
ಇನ್ನು, ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ಚಿಕ್ಕಣ್ಣ ಹೀರೋ ಆಗಿರುವ ಚಿತ್ರಕ್ಕೆ ಎಲ್ಲಾ ನಟರು ಸಾಥ್ ನೀಡುತ್ತಿದ್ದಾರೆ. ಮುಖ್ಯವಾಗಿ ಶಿವರಾಜ್ ಕುಮಾರ್, ದರ್ಶನ್, ಧ್ರುವ ಸಿನಿಮಾ ನೋಡಿ ಪ್ರೋತ್ಸಾಹಿಸಲಿದ್ದಾರೆ.
ಇನ್ನು, ಈ ಚಿತ್ರವನ್ನು ಸ್ಮಿತಾ ಉಮಾಪತಿ ನಿರ್ಮಿಸಿದ್ದು, ಅನಿಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಲೈಕಾ ನಾಯಕಿ.