Advertisement

ಕ್ರೀಡೆ-ಯೋಗದಿಂದ ಸದೃಢ ಆರೋಗ್ಯ

12:55 PM Feb 24, 2020 | Naveen |

ಚಿಕ್ಕಮಗಳೂರು: ಆರೋಗ್ಯ ಸಂಪತ್ತನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಭಾನುವಾರ ನಗರದ ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಉತ್ಸವದ ಅಂಗವಾಗಿ ಆಯೋಜಿಸಿದ್ದಫಿಟ್‌ ಚಿಕ್ಕಮಗಳೂರು (ಉತ್ಸವಥಾನ್‌ ನಡಿಗೆ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ. ಆದ್ದರಿಂದ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಯೋಗ, ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆದ್ದರಿಂದ ಚಿಕ್ಕಮಗಳೂರು ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ಹಲವು ಕ್ರಿಯಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದ್ದು, ಉತ್ಸವ ನಡಿಗೆ ಮೂಲಕ ಮೊದಲ ಹೆಜ್ಜೆ ಹಾಕಲಾಗಿದೆ ಎಂದರು.

ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ನಿರ್ಮಾಣವಾಗಿದ್ದು, ಜಿಲ್ಲಾ ಉತ್ಸವ ಹಿನ್ನೆಲೆ ಇಂದಿನಿಂದ ಗ್ರಾಮೀಣ ಕ್ರೀಡಾಕೂಟ ಪ್ರಾರಂಭಗೊಂಡಿದೆ. ನಗರದ ಹೊರವಲಯದಲ್ಲಿ ಕೆಸರುಗದ್ದೆ ಓಟ, ಭಾರ ಎತ್ತಿಕೊಂಡು ಓಡುವ ಸ್ಪರ್ಧೆ, ಹಗ್ಗ ಜಗ್ಗಾಟ, ನಿಧಿ
ಹುಡುಕುವ ಸ್ಪರ್ಧೆ ಹಾಗೂ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಗಾಳಿಪಟ ಹಾರಿಸುವುದು, ಮಡಿಕೆ ಒಡೆಯುವುದು, ಮ್ಯೂಸಿಕಲ್‌ ಚೇರ್‌ ಸ್ಪರ್ಧೆಗಳು ನಡೆಯುತ್ತವೆ ಎಂದರು.

ವಿವಿಧ ವಯೋಮಿತಿಗೆ ಅನುಗುಣವಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು, ಇಂದು ರಾಜ್ಯಮಟ್ಟದ ಯೋಗ, ಟೆಕ್ವಾಂಡೋ ಹಾಗೂ ಚೆಸ್‌ ಪಂದ್ಯಾವಳಿಗಳು, ಫೆ.24ರಂದು ಜಿಲ್ಲಾಮಟ್ಟದ ಕಬಡ್ಡಿ, ವಾಲಿಬಾಲ್‌ ಹಾಗೂ ಫೆ.25 ರಂದು ರಾಜ್ಯಮಟ್ಟದ ಕಬಡ್ಡಿ, ವಾಲಿಬಾಲ್‌ ಮತ್ತು ಸಾಹಸ ಕ್ರೀಡೆಗಳು ನಡೆಯಲಿದೆ ಎಂದು ಹೇಳಿದರು.

ಫೆ.28 ರಂದು ವಿವಿಧ ಕಲಾತಂಡಗಳ 500 ಕಲಾವಿದರಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಮೆರವಣಿಗೆ ಜರುಗಲಿದೆ. ಸಂಜೆ 6.30 ಗಂಟೆಗೆ ಜಿಲ್ಲಾ ಆಟದ ಮೈದಾನದ ಮುಖ್ಯ ವೇದಿಕೆಯಲ್ಲಿ ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಉತ್ಸವ ಪ್ರಾರಂಭವಾಗಲಿದೆ ಎಂದರು.

Advertisement

ಉತ್ಸವದಲ್ಲಿ ಆಹಾರ ಮೇಳ, ವಸ್ತು ಪ್ರದರ್ಶನ, ರಿಯಾಲಿಟಿ ಶೋಗಳಲ್ಲಿ ಪ್ರಸಿದ್ಧಿ ಹೊಂದಿರುವ ಸಂಗೀತಗಾರರಿಂದ ಸುಗಮ ಸಂಗೀತ, ಸೃತ್ಯ ಹಾಗೂ ಆಳ್ವಾಸ್‌ ಕಲಾ ತಂಡಗಳ ಕಲಾ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಉತ್ಸವಥಾನ್‌ ನಡಿಗೆಯಲ್ಲಿ ಸಾರ್ವಜನಿಕರು, ವಿವಿಧ ಶಾಲೆಯ ಮಕ್ಕಳು, ಇಲಾಖೆ ಅಧಿಕಾರಿಗಳು ಸೇರಿದಂತೆ 8 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ಜಾಥಾನಡಿಗೆ ನಗರದ ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಿಂದ, ಆರಂಭವಾಗಿ ಐ.ಜಿ.ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಜಿಲ್ಲಾ ಆಟದ ಮೈದಾನ ತಲುಪಿತು. ಜಾಥದಲ್ಲಿ ವಂದೇ ಮಾತರಂ, ಭಾರತ್‌ ಮಾತಾ ಕೀ ಜೈ, ಬನ್ನಿ ಬಿನ್ನಿ ಚಿಕ್ಕಮಗಳೂರು ಹಬ್ಬದಲ್ಲಿ ಭಾಗವಹಿಸಿ ಎಂಬ ಘೋಷಗಳು ಮುಳುಗಿದವು.

ಇದೇ ಸಂದರ್ಭದಲ್ಲಿ ಫಿಟ್‌ ಚಿಕ್ಕಮಗಳೂರು ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಯೋಗ ಚಟುವಟಿಕೆಗೆ ಚಾಲನೆ ನೀಡಿದರು. ನಗರದ ಪತಂಜಲಿ ಯೋಗ ಸಂಸ್ಥೆಯವರು ಯೋಗ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ಕುಮಾರ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next