Advertisement

ಭಾರತ ತತ್ವಜ್ಞಾನಿಗಳ ತವರು: ಡಾ|ಮಂಜುಳಾ

04:36 PM May 10, 2019 | Naveen |

ಚಿಕ್ಕಮಗಳೂರು: ನಮ್ಮ ದೇಶವು ತತ್ವಜ್ಞಾನಿಗಳ ತವರಾಗಿದೆ. ಶ್ರೀ ಶಂಕರಾಚಾರ್ಯರು ಭಾರತ ಕಂಡ ಸರ್ವ ಶ್ರೇಷ್ಠ ಯತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ| ಮಂಜುಳಾ ಹುಲ್ಲಳ್ಳಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಆಯೋಜಿಸಿದ್ದ ಶ್ರೀಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶ್ರೀಶಂಕರಾಚಾರ್ಯರು ಅದ್ವೈತ ಮತ ಸ್ಥಾಪನಾಚಾರ್ಯರು, ಸಮಾಜ ಸುಧಾರಕರು. ಇದಕ್ಕೆಲ್ಲ ಕಲಶವಿಟ್ಟಂತೆ ಅಪೂವ‌ರ್ ಪ್ರತಿಭಾ ಸಂಪನ್ನ ಕವಿಗಳು, ಮಹಾದಾರ್ಶನಿಕರು, ಯುಗ ಪುರುಷರು ಆಗಿದ್ದರು. ತಮ್ಮ ಅಲ್ಪಾಯುಷ್ಯದಲ್ಲಿಯೇ ಇಡೀ ದೇಶವನ್ನು ಎರಡು ಬಾರಿ ಸುತ್ತಿ ಅಪಾರ ಸಾಧನೆ ಮಾಡಿದವರು ಎಂದು ಬಣ್ಣಿಸಿದರು.

ಶ್ರೀಶಂಕರರು ಆತ್ಮ, ಪರಮಾತ್ಮ ಬೇರೆ ಅಲ್ಲ ಅನ್ನುವ ಪರಮ ಅರ್ಥದಲ್ಲಿ ಅದ್ವೈತ ಮತವನ್ನು ಎತ್ತಿ ಹಿಡಿದರು. ಈ ತತ್ವವನ್ನು ಮುಂದುವರೆಸಿದ ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ತತ್ವವನ್ನು, ಶ್ರೀಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು ಎತ್ತಿ ಹಿಡಿದರು ಎಂದು ತಿಳಿಸಿದರು.

ಈ ಎಲ್ಲ ತತ್ವ ಜಿಜ್ಞಾಸೆಗಳು ಆತ್ಮ, ಪರಮಾತ್ಮದ ಅನ್ವೇಷಣೆಯನ್ನೇ ಪರಮ ಗುರಿಯಾಗಿ ಇರಿಸಿಕೊಂಡಿವೆ. ಭಾರತೀಯ ತತ್ವಗಳಿಗೆ ಹೊಸ ಆಯಾಮ ನೀಡಿದ ಕಾರಣ ಈ ಎಲ್ಲ ತತ್ವಜ್ಞಾನಿಗಳನ್ನು ಸ್ಮರಿಸುತ್ತ ಇಂದು ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಶ್ರೀಶಂಕರರು ತಮ್ಮ ಅಲ್ಪಾಯುಷ್ಯದಲ್ಲಿಯೇ ನಾಲ್ಕು ವೇದಗಳನ್ನು ಅಭ್ಯಾಸ ಮಾಡಿದ್ದರು. ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ನಮ್ಮ ಜಿಲ್ಲೆಯ ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿ ಅಹಂ ಬ್ರಹ್ಮಾಸ್ಮಿ ಎಂಬ ಘೋಷವಾಖ್ಯ ನೀಡಿದರು. ಅಹಂ ಬ್ರಹ್ಮಾಸ್ಮಿ ಎಂದರೆ ನಾನು ಬ್ರಹ್ಮನೇ ಆಗಿದ್ದೇನೆ ಎಂಬ ಅರ್ಥ ಬರುತ್ತದೆ. ಅದೇ ರೀತಿ ಪಶ್ಚಿಮ ಭಾರತದ ಗುಜರಾತ್‌ ದ್ವಾರಕೆಯಲ್ಲಿ ದ್ವಾರಕಾಪೀಠ ಸ್ಥಾಪಿಸಿ ನೀನೂ ಅದೇ ಆಗಿರುವೆ ಎಂಬ ಅರ್ಥದ ತತ್‌ತ್ವಂ ಅಪಿ ಎಂಬ ಘೋಷ ವಾಖ್ಯ ನೀಡಿದರು ಎಂದು ಮಾಹಿತಿ ನೀಡಿದರು.

ಪೂರ್ವ ಭಾರತದ ಒರಿಸ್ಸಾದ ಪುರಿಯಲ್ಲಿ ಶ್ರೀಶಂಕರ ಪೀಠ ಸ್ಥಾಪಿಸಿ ಪ್ರಜ್ಞಾನಂ ಬ್ರಹ್ಮ, ಸಾಕ್ಷಿಯೇ ಬ್ರಹ್ಮ ಎಂಬ ಘೋಷ ವಾಖ್ಯ ನೀಡಿದರೆ, ಉತ್ತರದ ಉತ್ತರಾಖಂಡದ ಬದರಿಯಲ್ಲಿ ಜ್ಯೋತಿಕ ಮಠ ಸ್ಥಾಪಿಸಿ ಅಯಮಾತ್ಮಾ ಬ್ರಹ್ಮ, ಈ ಆತ್ಮವೆ ಬ್ರಹ್ಮವಾಗಿದೆ ಎಂದರು. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸುವ ಮೂಲಕ ದೇಶದ ಧರ್ಮಕ್ಕೆ ಒಂದು ಹೊಸ ಆಯಾಮ ದೊರೆಯಿತು ಎಂದು ತಿಳಿಸಿದರು. ಶ್ರೀಶಂಕರರು ಅತ್ಯಂತ ಉತ್ತಮ ಕವಿಯಾಗಿದ್ದರು. ಅವರ ಹೆಸರಿನಲ್ಲಿ 240 ಶ್ಲೋಕಗಳು ದೊರೆತಿವೆ. ಅವರು ರಚಿಸಿದ ಸೌಂದರ್ಯ ಲಹರಿ, ಶಿವಾನಂದ ಲಹರಿ ಇಂದಿಗೂ ಹೆಚ್ಚು ಪ್ರಸ್ತುತವಾಗಿವೆ ಎಂದು ಹೇಳಿದರು.

ಈ ವೇಳೆ ಡಿಸಿ ಡಾ| ಬಗಾದಿ ಗೌತಮ್‌, ಜಿಪಂ ಸಿಇಒ ಎಸ್‌.ಅಶ್ವತಿ, ಎಡಿಸಿ ಡಾ| ಕುಮಾರ್‌, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಷಿ ಶ್ರೀಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಶ್ರೀಶಂಕರರು ಅತ್ಯಂತ ಉತ್ತಮ ಕವಿಯಾಗಿದ್ದರು. ಅವರ ಹೆಸರಿನಲ್ಲಿ 240 ಶ್ಲೋಕಗಳು ದೊರೆತಿವೆ. ಅವರು ರಚಿಸಿದ ಸೌಂದರ್ಯ ಲಹರಿ, ಶಿವಾನಂದ ಲಹರಿ ಇಂದಿಗೂ ಹೆಚ್ಚು ಪ್ರಸ್ತುತವಾಗಿವೆ.
•ಡಾ| ಮಂಜುಳಾ,
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ.

Advertisement

Udayavani is now on Telegram. Click here to join our channel and stay updated with the latest news.

Next