Advertisement

ನಿರಾಶ್ರಿತರ ಕೇಂದ್ರಕ್ಕೆ ಕಾರ್ಮಿಕರು

05:18 PM May 06, 2020 | Naveen |

ಚಿಕ್ಕಮಗಳೂರು: ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿರುವ ಬೇರೆ ರಾಜ್ಯಗಳ ವಲಸೆ ಕಾರ್ಮಿಕರಿಗೆ ಅವರ ರಾಜ್ಯಗಳಿಗೆ ಕಳಿಸಿಕೊಡಲು ಸರ್ಕಾರ ಆದೇಶ ನೀಡಿ ಸೇವಾಸಿಂಧೂ ಆನ್‌ಲೈನ್‌ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಮಂಗಳವಾರ ತಾಂತ್ರಿಕ ದೋಷದಿಂದ ವೆಬ್‌ಸೈಟ್‌ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಮಿಳುನಾಡು ಮೂಲದ 200 ಕ್ಕೂ ಹೆಚ್ಚು ಕಾರ್ಮಿಕರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.

Advertisement

ಚಿಕ್ಕಮಗಳೂರು ತಾಲೂಕಿನ ಆಲದಗುಡ್ಡೆ ಸುತ್ತಮುತ್ತಲ ತೋಟಗಳಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೆಣಸು ಕೊಯ್ಲಿಗೆ ತಮಿಳುನಾಡು ಸೇಲಂ ಜಿಲ್ಲೆಯ ವೃದ್ಧರು, ಮಕ್ಕಳು, ಮಹಿಳೆಯರು ಹಾಗೂ ಇಬ್ಬರು ಗರ್ಭಿಣಿಯರು ಸೇರಿದಂತೆ 80ಕ್ಕೂ ಮಂದಿ ಲಾಕ್‌ಡೌನ್‌ ನಿಂದ ತಮ್ಮ ಊರುಗಳಿಗೆ ತೆರಳಲಾಗದೆ ತೋಟಗಳಲ್ಲಿ ಸಿಲುಕಿದ್ದರು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ರಾಜ್ಯಕ್ಕೆ ಹೋಗಲು ಸರ್ಕಾರ ಅವಕಾಶ ನೀಡಿದ್ದರ ಬಗ್ಗೆ ಮಾಹಿತಿ ಪಡೆದ ಕಾರ್ಮಿಕರು ಸೇವಾಸಿಂಧೂ ಆನ್‌ ಲೈನ್‌ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಲು ಮಂಗಳವಾರ ಬೆಳಗ್ಗೆ ತಮ್ಮ ಅಗತ್ಯ ವಸ್ತುಗಳೊಂದಿಗೆ ತಾಲೂಕು ಕಚೇರಿಗೆ ಬಂದಿದ್ದರು.ಸೇವಾಸಿಂಧೂ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಿ ನಮ್ಮನ್ನು ನಮ್ಮ ರಾಜ್ಯಕ್ಕೆ ಹೋಗಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಸೇವಾ ಸಿಂಧೂ ಆನ್‌ ಲೈನ್‌ ವೆಬ್‌ಸೈಟ್‌ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು, ಮರು ಚಾಲನೆ ಪಡೆಯಲು ಎರಡು ದಿನ ಕಾಲಾವಕಾಶ ಬೇಕಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಮರಳಿ ತೋಟಕ್ಕೂ ತೆರಳಲಾಗದೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಕಾರ್ಮಿಕರು ಕಂಗಾಲಾಗಿದ್ದರು. ಪಶ್ಚಿಮ ಬಂಗಾಳ ರಾಜ್ಯದ 15ಕ್ಕೂ ಹೆಚ್ಚು ಯುವಕರ ತಂಡ ಸಾಮಿಲ್‌ಗ‌ಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅವರು ತಮ್ಮ ಊರುಗಳಿಗೆ ತೆರಳಲು ಅರ್ಜಿ ಸಲ್ಲಿಸಲು ತಾಲೂಕು ಕಚೇರಿಗೆ ಬಂದಿದ್ದರು.

ಆನ್‌ಲೈನ್‌ ಸ್ಥಗಿತದಿಂದ ಅವರು ಕೂಡ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ದಿಕ್ಕು ಕಾಣದಂತಾಗಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಅವರಿಗೆ ನಿರಾಶ್ರಿತ ಕೇಂದ್ರದಲ್ಲಿ ವಾಸ್ತವ್ಯ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ವಿಜಯಪುರ ಜಿಲ್ಲೆಯ ಹೂವಿನಹಡಗಲಿಗೆ ತೆರಳಲು ಬಂದಿದ್ದ ಸುಮಾರು 30ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರನ್ನು ತಾಲೂಕು ಕಚೇರಿ ಆವರಣದಿಂದ ಬಸ್‌ಗಳ ಮೂಲಕ ಅವರ ಜಿಲ್ಲೆಗೆ ಕಳಿಸಿಕೊಟ್ಟಿದೆ.

ಸೇವಾ ಸಿಂಧೂ ಆನ್‌ ಲೈನ್‌ ವೆಬ್‌ಸೈಟ್‌ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು ಮರು ಚಾಲನೆ ಪಡೆಯಲು ಎರಡು ದಿನಗಳ ಬೇಕಾಗುತ್ತದೆ. ಕಾರ್ಮಿಕರು ಮರಳಿ ತೋಟಕ್ಕೆ ಹೋಗಲು ಕಷ್ಟವಾಗುವುದರಿಂದ ಅವರಿಗೆ ನಿರಾಶ್ರಿತ ಕೇಂದ್ರದಲ್ಲಿ ನೆಲೆ ಕಲ್ಪಿಸಿ ವೆಬ್‌ಸೈಟ್‌ ಆರಂಭಗೊಂಡ ನಂತರ ಅವರನ್ನು ಅವರ ರಾಜ್ಯಕ್ಕೆ ಕಳಿಸಿಕೊಡಲಾಗುವುದು.?
ಹರೀಶ್‌ ಪಾಂಡೆ,
ಪೊಲೀಸ್‌ ವರಿಷ್ಠಾಧಿಕಾರಿ

Advertisement

ತಾಂತ್ರಿಕ ದೋಷದಿಂದ ವೆಬ್‌ಸೈಟ್‌ ಸ್ಥಗಿತಗೊಂಡಿದ್ದು ತಮಿಳುನಾಡಿನ ವಲಸೆ ಕಾರ್ಮಿಕರ ಹೆಸರು ವಿಳಾಸಗಳನ್ನು ಪರಿಶೀಲನೆ ನಡೆಸಿ ಪಟ್ಟಿ ತಯಾರಿಸಿಕೊಳ್ಳಲಾಗುತ್ತಿದ್ದು ಅಗತ್ಯ ಕ್ರಮಗಳಿಗಾಗಿ ಜಿಲ್ಲಾಡಳಿತಕ್ಕೆ ಕೋರಲಾಗುವುದು.
ನಂದಕುಮಾರ್‌,
ತಹಶೀಲ್ದಾರ್‌.

Advertisement

Udayavani is now on Telegram. Click here to join our channel and stay updated with the latest news.

Next