ಚಿಕ್ಕಮಗಳೂರು: ಕೋವಿಡ್ ಸೋಂಕು ಪ್ರಕರಣ ರಾಜ್ಯದಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನ ಪ್ರಕರಣ ಕಂಡು ಬಂದಿಲ್ಲವಾದರೂ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ನಾಗರೀಕರಿಗೂ ಉಚಿತ ಮಾಸ್ಕ್ ವಿತರಣೆಗೆ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದ ಜಿಲ್ಲೆಯೊಳಗೆ ಸೋಂಕು ಇದುವರೆಗೂ ನುಸುಳಲು ಅವಕಾಶ ನೀಡಿಲ್ಲ, ಜಿಲ್ಲೆ ಗ್ರೀನ್ ಜೋನ್‌ಗೆ ಒಳಪಟಿದ್ದು, ವಿದೇಶದಿಂದ ಮರಳಿದ 273 ಮಂದಿಯನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 200 ಕ್ಕೂ ಹೆಚ್ಚು ಮಂದಿ 28 ದಿನಗಳ ನಿಗಾ ಅವಧಿಯನ್ನು ಪೂರೈಸಿದ್ದು, ಪ್ರಾರಂಭದಲ್ಲಿ ವಿದೇಶದಿಂದ ಮರಳಿದವರಲ್ಲಿ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಅವರೆಲ್ಲರ ವೈದ್ಯಕೀಯ ವರದಿಗಳಲ್ಲಿ ಕೋವಿಡ್ ನೆಗೆಟಿವ್ ಅಂಶ ಕಂಡು ಬಂದಿದ್ದು, ಕೋವಿಡ್ ಮುಕ್ತ ಜಿಲ್ಲೆಯಾಗಿದೆ. ಕೋವಿಡ್ ಸೋಂಕು ತಡೆಗಟ್ಟಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನದಂತೆ ಜಿಲ್ಲಾದ್ಯಂತ ಉಚಿತ ಮಾಸ್ಕ್ ವಿತರಣೆಗೆ ಮುಂದಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದೆ.
ಸ್ಥಳೀಯ ಸ್ವಸಹಾಯ ಸಂಘಗಳ ಮೂಲಕ ಮಾಸ್ಕ್ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಮಾಸ್ಕ್ ವಿತರಣೆ ಜವಾಬ್ದಾರಿಯನ್ನು ಕಂದಾಯ ಉಪವಿಭಾಗಾಧಿಕಾರಿ ನಾಗರಾಜ್ ಅವರಿಗೆ ನೀಡಲಾಗಿದೆ. ಜಿಲ್ಲೆಯ ಪ್ರತಿ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗಳಿಗೆ ಮಾಸ್ಕ್ ವಿತರಣೆ ಮಾಡಲಿದ್ದು, ಗುರುವಾರ ನಗರದ ಎಲ್ಲಾ ಮತಗಟ್ಟೆಗಳಿಗೂ 1.25 ಲಕ್ಷದ ಮಾಸ್ಕ್ ವಿತರಣೆಗೆ ಪೂರ್ವ ಸಿದ್ಧತೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಉಚಿತ ಮಾಸ್ಕ್ ವಿತರಣೆಗೆ ಚಾಲನೆ ನೀಡಲಿದ್ದಾರೆ.
ಜಿಲ್ಲೆಯ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗಗಳಲ್ಲೂ ಮಾಸ್ಕ್ಗಳ ವಿತರಣೆಗೆ ಬೂತ್ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿಸಿದೆ. ಇದನ್ನು ಉಲ್ಲಂಘಿಸಿದವರಿಗೆ ಪೊಲೀಸ್ ಇಲಾಖೆ 5 ಸಾವಿರ ರೂ. ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.