Advertisement
ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸರ್ವ ಸದಸ್ಯರ ಸಮಾನ್ಯ ಸಭೆಯಲ್ಲಿ ಶೃಂಗೇರಿ ಶಿವಣ್ಣ ವಿಷಯ ಪ್ರಸ್ತಾಪಿಸಿ, ಜಿಲ್ಲೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ದೇಶ, ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ದೇಶದಲ್ಲಿ ಕೊರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ಒಳ್ಳೆಯದು ಎಂದರು.
Related Articles
Advertisement
ಸದಸ್ಯ ಸೋಮಶೇಖರ್ ಮಾತನಾಡಿ, ಅನುಪಾಲನಾ ವರದಿ ಮೇಲೆ ಚರ್ಚೆಯಾಗಲಿ. ಬಜೆಟ್ ವಿಚಾರದ ಬಗ್ಗೆ ಇಲ್ಲಿ ಚರ್ಚೆ ಬೇಡ ಎಂದರು. ಹತ್ತು ವರ್ಷದಲ್ಲಿ ಯಾವ ಬಜೆಟ್ ಏನಾಗಿದೆ ಅದನ್ನು ಹೇಳಬೇಕಾಗುತ್ತದೆ ಎಂದು ಸದಸ್ಯ ಮಹೇಶ್ ಒಡೆಯರ್ ಬಜೆಟ್ ಚರ್ಚೆಗೆ ತೆರೆ ಎಳೆದರು.
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದರೆ ಹೇಗೆ ಎಂದು ಸದಸ್ಯ ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು. ಸದಸ್ಯ ಪ್ರಭಾಕರ್ ಮಾತನಾಡಿ, ಇತ್ತೀಚೆಗೆ ಗುಡ್ಡೆತೋಟ ಗ್ರಾಮದಲ್ಲಿ ದರೋಡೆ ಪ್ರಕರಣ ನಡೆದಿದ್ದು, ಮಲೆನಾಡು ಪ್ರದೇಶದಲ್ಲಿ ಒಚಿಟಿ ಮನೆಗಳಿದ್ದು ರಕ್ಷಣೆಗೆ ಆಯುಧ ಇರಿಸಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು. ಕೊಡಗು ಜಿಲ್ಲೆ ಮಾದರಿಯಲ್ಲಿ ಒಂಟಿ ಮನೆಗಳಲ್ಲಿ ಆಯುಧ ಹೊಂದಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಮಲೆನಾಡು ಭಾಗದಲ್ಲಿ ಪ್ರಾಣ, ಆಸ್ತಿ ರಕ್ಷಣೆ ಬಹಳ ಕಷ್ಟ ಎಂದರು.
ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಮಾ.13ಕ್ಕೆ ಕೆ-2 ಮುಚ್ಚುವ ಬಗ್ಗೆ ಸರ್ಕಾರದಿಂದ ಸುತ್ತೋಲೆ ಬಂದಿದೆ. ಜಿಲ್ಲೆಯಲ್ಲಿ ಅನೇಕ ಕಾಮಗಾರಿಗಳು ಅಪೂರ್ಣವಾಗಿವೆ. ಕೆಲ ಕಾಮಗಾರಿ ಮುಗಿದ್ದರು ಜಿಪಿಎಸ್ ವಿಳಂಬವಾಗಿದೆ. ತಾಂತ್ರಿಕ ಕಾರಣದಿಂದ ಬಿಲ್ ಪಾವತಿಸಲು ಸಾಧ್ಯವಾಗಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗಲಿದೆ. ಆದ್ದರಿಂದ ಕಾಮಗಾರಿಗಳ ಅನುದಾನವನ್ನು ಸಿಇಒ ಅವರ ಪಿಡಿ ಖಾತೆಗೆ ವರ್ಗಾಯಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಹಣ ಸರ್ಕಾರಕ್ಕೆ ವಾಪಸ್ ಕಳುಹಿಸಬಾರದು ಎಂದರು.
ಕಳಸ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೂರ್ಣಗೊಳ್ಳುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಸಿಇಒ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಪ್ರಭಾಕರ್ ಆಗ್ರಹಿಸಿದರು.
ಜಿಲ್ಲೆಯ ಬಹುತೇಕ ಶುದ್ಧಗಂಗಾ ಘಟಕಗಳು ಉಪಯೋಗಿಸಲು ಬಾರದಾಗಿದ್ದು, ಅವುಗಳನ್ನು ಅಗತ್ಯವಿರುವ ಕಡೆಗೆ ವರ್ಗಾಯಿಸುವಂತೆ ಕವಿತಾ ಲಿಂಗರಾಜ್ ಸಲಹೆ ನೀಡಿದರು. ಜಿಲ್ಲೆಯಲ್ಲಿ 231 ಶುದ್ಧಗಂಗಾ ಘಟಕಗಳ ಪೈಕಿ 41 ಹಾಳಾಗಿವೆ. ಸದ್ಯದಲ್ಲೇ ದುರಸ್ತಿ ಮಾಡಲಾಗುವುದು ಎಂದು ಸಂಬಂಧಪಟ್ಟ ಇಲಾಖೆ ಇಂಜಿನಿಯರ್ ಸಭೆಗೆ ತಿಳಿಸಿದರು.
ಮೆಣಸೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೇಲೆ ಅವ್ಯವಹಾರದ ಆರೋಪಗಳಿದ್ದರೂ ಏಕೆ ಅವರ ವಿರುದ್ಧ ಕ್ರಮವಿಲ್ಲ ಎಂದು ಸದಾಶಿವ ಕೇಳಿದರು. ಈ ಬಗ್ಗೆ ಮತ್ತೆ ಪರಿಶೀಲಿಸಿಲು ಸಿಇಒ ಸೂಚಿಸಿದರು. ತರೀಕೆರೆ, ಕಡೂರು, ಚಿಕ್ಕಮಗಳೂರಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಅನ್ಯಕ್ರಾಂತ ಮಾಡಿ ಇ-ಖಾತೆ ಮಾಡುವಾಗ ಅಕ್ರಮ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮಹೇಶ್ ಒಡೆಯರ್ ಆಗ್ರಹಿಸಿದರು.
ಕಳೆದ ಆಗಸ್ಟ್ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಸರ್ಕಾರಿ ಶಾಲೆ ಕಟ್ಟಡಗಳು ಕುಸಿದು ಬಿದ್ದಿದ್ದು, ಕಟ್ಟಡ ದುರಿಸ್ತಿಗೆ ನೀಡಿರುವ ಎರಡು ಲಕ್ಷ ರೂ. ಸಾಲದು. ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕು ಮತ್ತು ಅಲೇಖಾನ್ ಹೊರಟ್ಟಿ ಶಾಲೆ ಕಟ್ಟಡ ನಿರ್ಮಿಸುವಂತೆ ಮೂಡಿಗೆರೆ ತಾಲೂಕು ಅಧ್ಯಕ್ಷ ರತನ್ ತಿಳಿಸಿದರು. ಇದೇ ಸಂದರ್ಭದಲ್ಲಿ ಅವಧಿ ಪೂರ್ಣಗೊಂಡ ವಿವಿಧ ಸಮಿತಿಗಳ ಪುನಾರಚಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.