Advertisement

ಬಿಸಿಲ ಬೇಗೆಗೆ ಕಾಫಿ ನಾಡ ಮಂದಿ ಹೈರಾಣ!

05:21 PM Mar 21, 2020 | Naveen |

ಚಿಕ್ಕಮಗಳೂರು: ಕಾಫಿ ನಾಡನ್ನು ಭೂ ಲೋಕದ ಸ್ವರ್ಗ ಎಂದು ಕೆರೆಯಲಾಗುತ್ತದೆ. ಇಲ್ಲಿಯ ನಿಸರ್ಗವೇ ಅಂತಹದ್ದು. ಬೆಟ್ಟಗುಡ್ಡ, ಕಾನನ, ತೊರೆ, ಝರಿ, ಪಶ್ಚಿಮಘಟ್ಟ ಪ್ರದೇಶದ ಪ್ರಕೃತಿ ಮಡಿಲಿನಲ್ಲಿರುವ ಜಿಲ್ಲೆಯ ಜನ ಬೇಸಿಗೆಯ ಬಿರು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ.

Advertisement

ಹೌದು… ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದೆ. ಪ್ರತಿದಿನ ಬೆಳಿಗ್ಗೆಯಿಂದಲೇ ಏರುಗತಿಯಲ್ಲಿ ಸಾಗುವ ಬಿಸಿಲಿನ ತಾಪಕ್ಕೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಕಂಗೆಟ್ಟಿದ್ದಾರೆ. ಬಿಸಿಲಿನ ಬೇಗೆಗೆ ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಬಿಸಿಲ ಬೇಗೆ ನೀಗಿಸಿಕೊಳ್ಳಲು ತಂಪು ಪಾನೀಯಗಳ ಮೋರೆ ಹೋಗಿದ್ದು, ಎಳನೀರು, ಕಬ್ಬಿನಹಾಲು, ಕಲ್ಲಂಗಡಿ, ಜ್ಯೂಸ್‌ ಸೇರಿದಂತೆ ಇತರೆ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಬೆಳಿಗ್ಗೆ ಏರುಗತಿಯಲ್ಲಿ ಸಾಗುವ ಬಿಸಿಲ ಧಗೆ ಮಧ್ಯಾಹ್ನದ ವೇಳೆಗೆ ಇನ್ನಷ್ಟು ಹೆಚ್ಚಾಗುತ್ತಿದ್ದು, ಅನ್ಯ ಕಾರ್ಯನಿಮಿತ್ತ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಆಗಮಿಸುವ ಜನರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇನ್ನೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಪಾಡು ಹೇಳತೀರದಾಗಿದೆ.  ಫ್ಯಾನ್‌, ಕೂಲರ್‌, ಏಸಿ ಇಲ್ಲದೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದಂತಾಗಿದೆ.

ಬಿಸಿಲ ಬೇಗೆ, ಕೊರೊನಾ ಭೀತಿ: ಕೊರೊನಾ ಮಹಾಮಾರಿ ಇಡೀ ವಿಶ್ವದ ನಿದ್ದೆಗೆಡಿಸಿದ್ದು, ಕಾಫಿನಾಡಿನ ಜನರಲ್ಲೂ ಆತಂಕ ಮೂಡಿಸಿದೆ. ಮಹಾಮಾರಿ ರೋಗ ಹರಡದಂತೆ ಜಿಲ್ಲಾಡಳಿತ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೂ, ಒಂದಿಷ್ಟು ಜನರು ಸ್ವಯಂ ಪ್ರೇರಿತವಾಗಿ ಮನೆಯಿಂದ ಹೊರಬರಲು ಹಿಂದೇಟು ಹಾಕಿದರೆ, ಇನ್ನೂ ಸುಡು ಬಿಸಿಲಿಗೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಜನಜಂಗುಳಿಯಿಂದ ತುಂಬಿರುತ್ತಿದ್ದ ನಗರದಲ್ಲಿ ಜನ ಸಂಚಾರ ವಿರಳವಾಗಿದೆ.

ಜನ ಹೈರಾಣು: ಈ ಹಿಂದೆ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದ ತಾಪಮಾನವನ್ನು ಜನರು ಎಂದೂ ಅನುಭವಿಸಿರಲಿಲ್ಲ. ಹೆಚ್ಚೆಂದರೆ 28 ಡಿಗ್ರಿ ಸೆಲ್ಸಿಯಸ್‌ ನಷ್ಟು ತಾಪಮಾನ ಕಂಡು ಬರುತ್ತಿತ್ತು. ಆದರೆ, ಈ ಬಾರಿ ಹವಾಮಾನ ವೈಪರೀತ್ಯದಿಂದ 33ಡಿಗ್ರಿ ಸೆಲ್ಸಿಯಸ್‌ ವರೆಗೂ ತಾಪಮಾನ ದಾಖಲಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿದೆ. ಬಿಸಿಲಿನ ಧಗೆ ಹೆಚ್ಚುತ್ತಿದೆ. ಮತ್ತೂಂದೆಡೆ ನಗರದಲ್ಲಿ ಧೂಳು ಹೆಚ್ಚಾಗಿದ್ದು, ಬಿಸಿಲ ಬೇಗೆ ಹಾಗೂ ಧೂಳಿನಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.

Advertisement

ಕೋಲರ್‌ ಮೊರೆ ಹೋದ ಜನ: ಬಿಸಿಲ ಬೇಗೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂ ದಿಯನ್ನು ಮಾತ್ರ ತಟ್ಟಿಲ್ಲ. ಫ್ಯಾನ್‌, ಏಸಿ, ಕೂಲರ್‌ ಇಲ್ಲದೇ ಮನೆಯಲ್ಲಿ ಇರಲು ಆಗದಿರುವಂತಾಗಿದೆ. ಹೇಗೋ ಮನೆಯಲ್ಲಿದ್ದರೆ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸುವವರು ಕೂಡ ಮನೆಯಲ್ಲಿ ಮಧ್ಯಾಹ್ನದ ವೇಳೆಗೆ ಕಾಲ ಕಳೆಯಲು ಸಾಧ್ಯವಾಗದಂತಾಗಿದೆ.

ಏಸಿ, ಫ್ಯಾನ್‌, ಕೂಲರ್‌, ಇಲ್ಲದೇ ಕೆಲಸದಿಂದ ದಣಿದು ಬರುವ ಜನರು ರಾತ್ರಿ ತಾಪಮಾನದಿಂದ ಸುಖನಿದ್ರೆ ಮಾಡಲು ಸಾಧ್ಯವಾಗದಂತಾಗಿದೆ. ಒಟ್ಟಾರೆಯಾಗಿ ಒಂದು ಕಡೆ ಕೊರೊನಾ ಭೀತಿ, ಮತ್ತೂಂದು ಕಡೆ ಸುಡುಬಿಸಿಲ ಬೇಗೆಯಿಂದ ಮಲೆನಾಡಿನ ಜನರು ಹೈರಾಣಾಗಿ ಹೋಗಿದ್ದಾರೆ.

ಕೊರೊನಾ ಭೀತಿ ಮತ್ತು ಬಿಸಿಲ ಬೇಗೆಯಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ನಗರವೇ ಸ್ತಬ್ಧವಾದಂತಾಗಿದೆ. ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 28 ರಿಂದ 30ಡಿಗ್ರಿ ವರೆಗೂ ತಾಪಮಾನ ದಾಖಲಾಗಿತ್ತು. ಈ ವರ್ಷ 32ರಿಂದ 33 ಡಿಗ್ರಿವರೆಗೂ ತಾಪಮಾನ ಹೆಚ್ಚಾಗಿದೆ. ಈ ತಾಪಮಾನಕ್ಕೆ ಮಲೆನಾಡಿನ ಜನರು ಹೈರಾಣಾಗಿ ಹೋಗಿದ್ದಾರೆ.
ಗುರುಶಾಂತಪ್ಪ,
ರೈತ ಮುಖಂಡರು

ಮಲೆನಾಡು ಭಾಗದಲ್ಲಿ ಈ ಪ್ರಮಾಣದ ಬಿಸಿಲನ್ನು ಜನರು ನೋಡಿರಲಿಲ್ಲ. ಈ ವರ್ಷ 33ಡಿಗ್ರಿವರೆಗೂ ತಾಪಮಾನ ಏರಿಕೆಯಾಗಿದ್ದು, ಇತ್ತೀಚೆಗೆ ಜಾಗತಿಕ ತಾಪಮಾನ ಏರುಪೇರು, ಹವಾಮಾನ ಬದಲಾವಣೆ ಮತ್ತು ದಟ್ಟ ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವುದರಿಂದ ಮಲೆನಾಡು ಭಾಗದಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಗಿರಿಜಾ ಶಂಕರ್‌, ಮಾಜಿ ಸದಸ್ಯರು, ರಾಜ್ಯ
ವನ್ಯಜೀವಿ ಮಂಡಳಿ

ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next