ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಂಗಳವಾರ ಮಳೆ ಆರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ ಹಾನಿ ಮುಂದುವರೆದಿದೆ. ಚಿಕ್ಕಮಗಳೂರು ತಾಲೂಕಿನ ಶಿರಗೊಳ ಗ್ರಾಮದ ಸಮೀಪ ರಸ್ತೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ತರೀಕೆರೆ ತಾಲೂಕಿನಲ್ಲಿ ಕೆರೆಗಳೆಲ್ಲ ತುಂಬಿ ಕೋಡಿಬಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ. ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಚಿಕ್ಕಮಗಳೂರು ತಾಲೂಕಿನ ವಿವಿಧೆಡೆಗಳಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಶಿರಗೊಳ ಗ್ರಾಮದ ಸಮೀಪ ರಸ್ತೆ ಕೊಚ್ಚಿ ಹೋಗಿದೆ. ಇದರಿಂದಾಗಿ ಶಿರಗೊಳ-ಕೋದಿ ಸಂಪರ್ಕ ಕಡಿತಗೊಂಡಿದ್ದು, ಈ ಮಾರ್ಗದಲ್ಲಿ ಓಡಾಡುತ್ತಿದ್ದ ಬಸ್ ಸಂಚಾರ ಸ್ಥಗಿತಗೊಂಡಿದೆ. ಭಾರೀ ಮಳೆಯಿಂದಾಗಿ ಎರಡು ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ, 2 ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ತರೀಕೆರೆ ತಾಲೂಕಿನಲ್ಲಿ ಮಳೆ ಇಲ್ಲವಾದರೂ ತುಂಬಿದ ಕೆರೆಗಳು ಸಮಸ್ಯೆ ಸೃಷ್ಟಿಸಿವೆ. ಈಗಲೂ ಕೆರೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಗಡಿಹಳ್ಳಿ-ಅಣ್ಣಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೋಮವಾರದಿಂದಲೂ ಅಣ್ಣಾಪುರ, ಹೊಸೂರು, ನಂದಿಪುರ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಕಾಟಿಗನೆರೆ, ಬೇಗೂರು, ಸಿದ್ದಾಪುರ ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿವೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಖಾಂಡ್ಯ ಹೋಬಳಿ ಸೇರಿದಂತೆ ಗಿರಿಶ್ರೇಣಿಗಳಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗುತ್ತಿದೆ. ಶೃಂಗೇರಿ, ನರಸಿಂಹರಾಜಪುರ ತಾಲೂಕಿನಲ್ಲೂ ಆಗಾಗ ಜೋರಾಗಿ ಮಳೆಯಾಗಿದೆ. ತರೀಕೆರೆ ತಾಲೂಕಿನಲ್ಲಿ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗಿದೆ.