Advertisement
ಇದು ಕಳೆದ ಕೆಲ ದಿನದಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಂಡುಬರುತ್ತಿರುವ ದೃಶ್ಯ. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರ ಹಾಗೂ ಮೈ-ಕೈ ನೋವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯತ್ತ ಮುಖಮಾಡುತ್ತಿದ್ದಾರೆ. ಹೀಗಾಗಿಯೇ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಏರಿದ್ದು,
ಒಂದೇ ಹಾಸಿಗೆಯಲ್ಲಿ ಇಬ್ಬರನ್ನು ಮಲಗಿಸಿ ಚಿಕಿತ್ಸೆ ನೀಡುವ ಅನಿವಾರ್ಯತೆ ಉಂಟಾಗಿದೆ.
ವಾರ್ಡ್ ತುಂಬಿ ಹೋಗಿದೆ. ಕಣ್ಣಿನ ಆಸ್ಪತ್ರೆ, ಸುಟ್ಟಗಾಯ, ವಾಂತಿಭೇದಿ ವಾರ್ಡ್ ಹಾಗೂ ಶಸ್ತ್ರ ಚಿಕಿತ್ಸೆ ನಂತರ ನೀಡುವ ಚಿಕಿತ್ಸೆ ವಿಭಾಗ, ಸಾಮೂಹಿಕ ಪ್ರಾರ್ಥನಾ ಕೊಠಡಿಯಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಕುರ್ಚಿಯಲ್ಲಿಯೇ ಕುಳಿತು ಡ್ರಿಪ್ಸ್ ಹಾಕಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು ಮಂಗಳವಾರ ಕಂಡು ಬಂದಿತು. ಕೆಲವರು ಒಂದೆರಡು ಬಾರಿ ಇದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿ ಮತ್ತೆ ಜ್ವರ ಹೆಚ್ಚಾದಾಗ ಮೂರನೆಯ ಬಾರಿ ಚಿಕಿತ್ಸೆಗೆ ಇದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.