ಚಿಕ್ಕಮಗಳೂರು: ನಗರಕ್ಕೆ ನೀರು ಪೂರೈಸುವ ಪಿಲ್ಟರ್ ಬೆಡ್ ಶುದ್ಧೀಕರಣಕ್ಕೆ ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದ್ದು, 15ದಿನಗಳೊಳಗೆ ಘಟಕದಲ್ಲಿ ತುಂಬಿರುವ ಹೂಳು ತೆಗೆದು ಶುದ್ಧೀಕರಣ ಮಾಡದಿದ್ದರೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹಕ್ಕು ಹೋರಾಟ ವೇದಿಕೆ ಸಂಚಾಲಕ ವಿಜಯ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಇರುವ ಬಡಾವಣೆಗಳಿಗೆ ನಗರಸಭೆಯು ಶುದ್ಧೀಕರಿಸದೇ ಕಲುಷಿತ ನೀರನ್ನು ಪೂರೈಸುತ್ತಿದೆ. ಇದನ್ನು ವಿರೋಧಿಸಿ ಇತ್ತೀಚೆಗೆ ರಾಮನಹಳ್ಳಿ ಪಿಲ್ಟರ್ ಬೆಡ್(ನೀರು ಶುದ್ಧೀಕರಣ ಘಟಕ) ಆವರಣದಲ್ಲಿ ಪ್ರತಿಭಟನೆ ನಡೆಸಿದಾಗ ನಗರಸಭೆ ಆಯುಕ್ತರು ಮತ್ತು ಇಂಜಿನಿಯರ್‌ಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ, 15 ದಿನಗಳೊಳಗೆ ಘಟಕವನ್ನು ಶುದ್ಧೀಕರಣ ಮಾಡಲಾಗುವುದು. ಅಮೃತ್ ಯೋಜನೆಯಡಿ ಇದಕ್ಕಾಗಿ ಅನುದಾನ ಮೀಸಲಿಡಲಾಗಿದ್ದು, ಕಾಮಗಾರಿಯನ್ನು ಈಗಾಗಲೇ ಗುತ್ತಿಗೆ ನೀಡಲಾಗಿದೆ ಎಂದು ತಿಳಿಸಿದ್ದರು. ಆದರೆ 1 ತಿಂಗಳಾದರೂ ಶುದ್ಧೀಕರಣ ಘಟಕದಲ್ಲಿ ಹೂಳು ತೆಗೆಯುವ ಕೆಲಸವನ್ನೇ ಇನ್ನೂ ಪೂರ್ಣಗೊಳಿಸಿಲ್ಲ. ಕಾಮಗಾರಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇದರ ಪರಿಣಾಮವಾಗಿ ರಾಮನಹಳ್ಳಿ, ವಿಜಯಪುರ, ದಂಟರಮಕ್ಕಿ ಸೇರಿದಂತೆ ಮತ್ತಿತರ ಬಡಾವಣೆಗಳಿಗೆ ಕಲುಷಿತ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂದು ಆರೋಪಿಸಿದರು.
ನಗರದಲ್ಲಿರುವ ಪಿಲ್ಟರ್ ಬೆಡ್ ಅನ್ನು ಕಳೆದ 20 ವರ್ಷಗಳಿಂದ ಶುದ್ಧೀಕರಣ ಮಾಡಿಲ್ಲ. ಪರಿಣಾಮ ಘಟಕ ಸಂಪೂರ್ಣವಾಗಿ ಹೂಳಿನಿಂದ ತುಂಬಿದೆ. ಅಲ್ಲದೇ ನಗರದಾದ್ಯಂತ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಕೊಳಚೆ ನೀರು ಚರಂಡಿಗಳ ಮೂಲಕ ಹರಿದು ಯಗಚಿ ಹಳ್ಳದ ಮೂಲಕ ಯಗಚಿ ನದಿ ಸೇರುತ್ತಿದೆ. ಇದೇ ಯಗಚಿ ನೀರನ್ನು ಮತ್ತೆ ಪಿಲ್ಟರ್ ಬೆಡ್‌ಗೆ ಸರಬರಾಜು ಮಾಡಿ ಆ ನೀರನ್ನು ಶುದ್ಧೀಕರಣ ಮಾಡದೇ ನಾಗರಿಕರ ಮನೆಗಳಿಗೆ ಪೂರೈಸಲಾಗುತ್ತಿದೆ. ಕಲುಷಿತ ನೀರನ್ನು ಕುಡಿದು ಸಾರ್ವಜನಿಕರು ಡೆಂಘೀನಂತಹ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಈ ಸಂಬಂಧ ಅಗತ್ಯ ಕ್ರಮ ವಹಿಸಬೇಕಾದ ನಗರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಕಂಡು ಕಾಣದಂತೆ ಜಾಣ ಕುರುಡರಾಗಿದ್ದಾರೆಂದು ದೂರಿದರು.
ನಗರದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದ್ದು, ಕೆಲವೆಡೆ ನಗರಸಭೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಈ ಟ್ಯಾಂಕರ್‌ಗಳಿಗೆ ನಗರಸಭೆಯ ಬ್ಯಾನರ್ ಇಲ್ಲದ ಪರಿಣಾಮ ಟ್ಯಾಂಕರ್ ನೀರು ಅಗತ್ಯವಿದ್ದವರಿಗೆ ಪೂರೈಕೆಯಾಗುತ್ತಿದೆಯೋ, ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ನಗರಸಭೆ ಟ್ಯಾಂಕರ್ ಮೂಲಕ ಬಲಾಡ್ಯರ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ನಾಗರಿಕರು ಆರೋಪಿಸುತ್ತಿದ್ದು, ಕೂಡಲೇ ಟ್ಯಾಂಕರ್‌ಗೆ ನಗರಸಭೆ ಬ್ಯಾನರ್ ಹಾಕಬೇಕೆಂದು ಒತ್ತಾಯಿಸಿದ ಅವರು, ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ಕೆಲವರು ದಂಧೆಯನ್ನಾಗಿಸಿಕೊಂಡಿದ್ದಾರೆ. ನೀರು ಬಳಕೆದಾರರಿಂದ ಟ್ಯಾಂಕರ್ ಮಾಲೀಕರು ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದು, ಜಿಲ್ಲಾಡಳಿತ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತೀ ಟ್ಯಾಂಕರ್ ನೀರಿಗೆ ನಿಗದಿತ ದರವನ್ನು ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ನಗರದಲ್ಲಿ ಅಮೃತ್ ಯೋಜನೆಯಡಿಯಲ್ಲಿ ನಿರ್ವಹಿಸಲಾಗುತ್ತಿರುವ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ಬಸವನಹಳ್ಳಿ, ವಿಜಯಪುರ ರಸ್ತೆಗಳಲ್ಲಿ 1-2 ಅಡಿ ಗುಂಡಿಗಳನ್ನು ತೋಡಲಾಗಿದೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ ಎಂದ ಅವರು, ಯುಜಿಡಿ ಸಂಪರ್ಕ ನೀಡದ ಪರಿಣಾಮ ಕೆಲವೆಡೆ ಶೌಚಾಲಯಗಳ ಕೊಳಚೆ ನೀರು ಚರಂಡಿಗಳಲ್ಲಿ ಹರಿದು ಯಗಚಿಹಳ್ಳ ಸೇರುತ್ತಿದೆ. ಇದೇ ನೀರನ್ನು ಮತ್ತೆ ನಾಗರಿಕರಿಗೆ ಕುಡಿಯಲು ಪೂರೈಸಲಾಗುತ್ತಿದೆ. ಪಿಲ್ಟರ್ ಶುದ್ಧೀಕರಣ ಸೇರಿದಂತೆ ಈ ಅವ್ಯವಸ್ಥೆಗಳನ್ನು 15 ದಿನಗಳ ಒಳಗೆ ಸರಿಪಡಿಸದಿದ್ದರೆ ವೇದಿಕೆಯು ವಿವಿಧ ಸಂಘ ಸಂಸ್ಥೆಗಳೊಂದಿಗೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನಗರದ ಕೆಲ ಬಡಾವಣೆಗಳಲ್ಲಿ ಕುಡಿಯುವ ನೀರಿ ತೀವ್ರ ಅಭಾವ ತಲೆದೋರಿದ್ದು, ಈ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾಗರಿಕ ಹೋರಾಟ ವೇದಿಕೆ ವತಿಯಿಂದ ಜೂ.5ರಿಂದ ಟ್ಯಾಂಕರ್ ಒಂದರ ಮೂಲಕ ನೀರು ಪೂರೈಕೆ ಮಾಡಲಾಗುವುದು. ನೀರಿನ ಆವಶ್ಯಕತೆ ಇರುವ ಬಡಾವಣೆ ನಿವಾಸಿಗಳು ದೂರವಾಣಿ ಕರೆ ಮಾಡಿದರೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುವುದು. ಈ ಟ್ಯಾಂಕರ್ ನೀರನ್ನು ಡ್ರಮ್‌ಗಳು, ಟ್ಯಾಂಕ್‌ಗಳಲ್ಲಿ ಹಿಡಿಯುವಂತಿಲ್ಲ. ಕೊಡಗಳ ಮೂಲಕವೇ ನೀರು ಪಡೆಯಬೇಕು. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಸಂಚಾಲಕರಾದ ಕಲೀಲ್, ಇರ್ಷಾದ್, ಬಶೀರ್, ನಾಗಪ್ಪ, ನಾಗರಾಜ್, ದಂಟರಮಕ್ಕಿ ವಿಜಯ್, ವಾಸು, ಜಯಕುಮಾರ್ ಇನ್ನಿತರರಿದ್ದರು.
ನಗರದಲ್ಲಿರುವ ಪಿಲ್ಟರ್ ಬೆಡ್ ಅನ್ನು ಕಳೆದ 20 ವರ್ಷಗಳಿಂದ ಶುದ್ಧೀಕರಣ ಮಾಡಿಲ್ಲ. ಪರಿಣಾಮ ಘಟಕ ಸಂಪೂರ್ಣ ಹೂಳಿನಿಂದ ತುಂಬಿದೆ. ಅಲ್ಲದೇ ನಗರದಾದ್ಯಂತ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಕೊಳಚೆ ನೀರು ಚರಂಡಿಗಳಲ್ಲಿ ಹರಿದು ಯಗಚಿ ಹಳ್ಳದ ಮೂಲಕ ಯಗಚಿ ನದಿ ಸೇರುತ್ತಿದೆ. ಇದೇ ಯಗಚಿ ನೀರನ್ನು ಮತ್ತೆ ಪಿಲ್ಟರ್ ಬೆಡ್‌ಗೆ ಸರಬರಾಜು ಮಾಡಿ ಆ ನೀರು ಶುದ್ಧೀಕರಿಸದೆ ಪೂರೈಸಲಾಗುತ್ತಿದೆ. ಕಲುಷಿತ ನೀರು ಕುಡಿದು ನಾಗರಿಕರು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಬೇಕಾದ ನಗರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಕಂಡು ಕಾಣದಂತೆ ಜಾಣ ಕುರುಡರಾಗಿದ್ದಾರೆ.
•
ವಿಜಯ್‌ಕುಮಾರ್,
ನಾಗರಿಕ ಹಕ್ಕು ಹೋರಾಟ ವೇದಿಕೆ ಸಂಚಾಲಕ.