Advertisement

ಚಿಕ್ಕಮಗಳೂರು: ಮಳೆ-ಪ್ರೇಕ್ಷಣೀಯ ಸ್ಥಳಗಳಲ್ಲಿ ಜನಜಂಗುಳಿ

06:03 PM Jul 08, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಇಲ್ಲಿನ ಪರ್ವತ ಶ್ರೇಣಿಗಳು, ಜಲಪಾತ ಗಳು, ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಪ್ರತೀ ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಪ್ರೇಕ್ಷಣೀಯ ಸ್ಥಳಗಳು ಜನ ಜುಂಗುಳಿಯಿಂದ ಕೂಡಿವೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಜನರು ಆಸ್ವಾದಿಸುತ್ತಿದ್ದಾರೆ.

Advertisement

ಜಿಲ್ಲೆಯ ಮಲೆನಾಡಿನಾದ್ಯಂತ ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ಇಲ್ಲಿನ ಜಲಪಾತಗಳು, ನದಿ, ತೋರೆ,
ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಎಲ್ಲೆಡೆ ಹಸಿರು ಚಿಗುರೊಡೆದಿದೆ. ಮಳೆಯ ಅಬ್ಬರದಿಂದ ಪರ್ವತ ಶ್ರೇಣಿ ಜಲಪಾತಗಳ ಸುತ್ತಮುತ್ತ ಮಂಜು ಮುಗಿಲೆತ್ತರಕ್ಕೆ ಏಳುತ್ತಿದೆ. ಪರ್ವತ ಶ್ರೇಣಿಗಳಲ್ಲಿ ಮಂಜು ಆವರಿಸುತ್ತಿದ್ದಂತೆ ನೀಲಿ ಆಕಾಶಕ್ಕೆ ಹಾಗೂ ಪರ್ವತಕ್ಕೆ ಮಂಜಿನ ಮುಸುಕು ಮತ್ತಿಕ್ಕುವ ಅನುಭವ ನೀಡಿದರೆ, ಮಂಜು ಸರಿಯುತ್ತಿದ್ದಂತೆ ಬೆಟ್ಟ ಶ್ರೇಣಿಗಳ ಸೌಂದರ್ಯ ವರ್ಣಿಸಲು ಅಸಾಧ್ಯ. ಹೀಗಾಗಿ ಇಲ್ಲಿನ ಪ್ರಕೃತಿಯನ್ನು ಆಸ್ವಾ ದಿಸಲು ಜನರು ಮುಗಿಬೀಳುತ್ತಿದ್ದಾರೆ.

ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದಲ್ಲಿನ ಸಿರಿಮನೆ ಜಲಪಾತ ಮೈದುಂಬಿ ಹರಿಯುತ್ತಿದೆ. ಹಾಗೇ ಮುಳ್ಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ ದರ್ಗಾಕ್ಕೆ ತೆರಳುವ ಮಾರ್ಗಮಧ್ಯೆ ಸಿಗುವ ದಭೆ ದಭೆ ಫಾಲ್ಸ್‌, ಹೊನ್ನಮ್ಮನ ಹಳ್ಳ, ಮಾಣಿಕ್ಯಧಾರ ಜಲಪಾತ ಹಾಗೂ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟಿ ಪ್ರದೇಶದ ಉದ್ದಕ್ಕೂ ಕರಿಬಂಡೆಗಳ ಮೇಲೆ ಜಲಕನ್ಯೆಯರು ಮೈಮರೆತು ನರ್ತಿಸುತ್ತಿದ್ದು ಈ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು ವಾಹನ ಸವಾರರು ರಸ್ತೆಬದಿಯಲ್ಲಿ ವಾಹನವನ್ನು ನಿಲ್ಲಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಟ್ಟದ ಮೇಲಿಂದ
ಇಳಿದು ಬರುವ ಜಲಕನ್ಯೆಯರು ಘಾಟಿ ಪ್ರದೇಶ ಇಳಿಜಾರು ಪ್ರಪಾತಕ್ಕೆ ಇಳಿಯುವ ಮನಮೋಹಕ ದೃಶ್ಯವನ್ನು ನಿತ್ಯ ಕಣ್ತುಂಬಿ
ಕೊಳ್ಳುತ್ತಿದ್ದಾರೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳನ್ನು ಸಾವಿರಾರು ಜನರು ನಿತ್ಯ ಆಸ್ವಾದಿಸುತ್ತಿದ್ದಾರೆ.

ಹಾಗೇ ಜಿಲ್ಲೆಯ ಕೆಮ್ಮಣ್ಣುಗುಂಡಿ, ಹೆಬ್ಬೆ ಜಲಪಾತ, ಕಲ್ಲತ್ತಗಿರಿ ಜಲಪಾತವನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ. ಶನಿವಾರ, ಭಾನುವಾರ ವಾರಾಂತ್ಯದಲ್ಲಿ ಮುಳ್ಳ ಯ್ಯನಗಿರಿ, ಶ್ರೀಗುರುದತ್ತಾತ್ರೇಯ ಬಾಬಾ ಬುಡನ್‌ ದರ್ಗಾ, ಮಾಣಿಕ್ಯಧಾರ ಹಾಗೂ ಹೊನ್ನಮ್ಮನ ಹಳ್ಳದ ವರ್ಣರಂಜಿತ ಪ್ರಕೃತಿ
ಸೌಂದರ್ಯವನ್ನು ಆಸ್ವಾದಿಸಲು ಭಾನುವಾರ 157 ಬೈಕ್‌, 619 ಕಾರು ಹಾಗೂ 47 ಟಿ.ಟಿ. ವಾಹನ ಹಾಗೂ ಮಿನಿಬಸ್‌ನಲ್ಲಿ ಅಂದಾಜು 3-4 ಸಾವಿರ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.

Advertisement

ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರ ಮನೆ ಧಾರ್ಮಿಕ ಕ್ಷೇತ್ರ ಹಾಗೂ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ಇಲ್ಲಿಗೂ
ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿದೆ. ದೇವರ ಮನೆಗೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇಲ್ಲಿನ ತೆರಳುವ ಮಾರ್ಗ ಕಿರಿದಾಗಿದ್ದು, ದೊಡ್ಡ ಬಸ್‌ನಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿದ ಪರಿಣಾಮ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು ಗಾಳಿ- ಮಳೆಯಲ್ಲೇ ಪ್ರವಾಸಿಗರು ಸಿಲುಕಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿಗೆ ದೊಡ್ಡ ವಾಹನದಲ್ಲಿ ಪ್ರವಾಸಿ ಗರು ಆಗಮಿಸುವುದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಸಿರಿಮನೆ ಜಲಪಾತವೂ ಮೈದುಂಬಿ ಹರಿಯುತ್ತಿದ್ದು, ಇಲ್ಲಿಗೆ ಭೇಟಿ
ನೀಡುವ ಪ್ರವಾಸಿಗರ ದಂಡು ಹೆಚ್ಚಾಗಿದೆ. ಒಟ್ಟಾರೆ ಜಿಲ್ಲಾದ್ಯಂತ ಮಳೆಯಾಗುತ್ತಿದೆ. ಮಳೆಯ ನಡುವೆ ಪ್ರೇಕ್ಷಣೀಯ ಸ್ಥಳಗಳಿಗೆ
ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಪ್ರವಾಸಿಗರ ನಿಯಂತ್ರಣಕ್ಕೆ ಆನ್‌ಲೈನ್‌ ಮೊರೆ ಹೋದ ಸರ್ಕಾರ: ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದು ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಆನ್‌ಲೈನ್‌ ಮೊರೆ ಹೋಗಲು ಮುಂದಾಗಿದೆ. ಮುಳ್ಳಯ್ಯನಗಿರಿ ಮತ್ತು ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ದರ್ಗಾ ಪ್ರದೇಶಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ಪ್ರವಾಸಿಗರನ್ನು ನಿಯಂತ್ರಿಸಲು ಮುಂದಾಗಿದೆ.
ಆನ್‌ಲೈನ್‌ ಪದ್ಧತಿ ಜಾರಿ ಬಳಿಕ ಪ್ರವಾಸಿಗರ ನಿಯಂತ್ರಣ ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next