ಚಿಕ್ಕಮಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಇನ್ನಷ್ಟು ಬಿಗಿ ಕ್ರಮ ಕೈಗೊಂಡ ಪರಿಣಾಮ ಶನಿವಾರ ನಗರದಲ್ಲಿ ಜನಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು ಇಡೀ ನಗರವೇ ಬಿಕೋ ಎನ್ನುತ್ತಿದೆ.
ಕಳೆದೆರೆಡು ದಿನಗಳ ಹಿಂದೇ ಲಾಕ್‌ಡೌನ್ ನಡುವೆ ಜನಸಂಚಾರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತ್ತು. ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ವಾಹನ ಸಂಚಾರವು ಏರಿಕೆಯಾಗಿತ್ತು. ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಇನಷ್ಟು ಬಿಗಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಶನಿವಾರ ಜನಸಂಚಾರಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದೆ.
ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮ ಹಾಗೂ ಸರ್ಕಾರಿ ರಜೆ ಇದ್ದ ಕಾರಣ ಜನರು ಮನೆಯಲ್ಲೇ ಇದ್ದು ಕಾಲ ಕಳೆದರು. ಬೈಕ್ ಮತ್ತು ಕಾರು ಸಂಚಾರ ವಿರಳವಾಗಿದ್ದು, ಅವುಗಳನ್ನು ಪೊಲೀಸರು ತಡೆದು ತಪಾಸಣೆಗೆ ಒಳಪಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಲಾಕ್‌ಡೌನ್‌ನಿಂದ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದ್ದು ಕೂಲಿ ಕಾರ್ಮಿಕರ ಗೋಳು ಇನ್ನಷ್ಟು ಬಿಗುಡಾಯಿಸಿದೇ. ಕೆಲವು ಎಸ್ಟೇಟ್ ಮಾಲೀಕರು ಕೂಲಿ ಕಾರ್ಮಿಕರೊಂದಿಗೆ ಕಳ್ಳಾಟವಾಡುತ್ತಿದ್ದು, ದುಡಿಸಿಕೊಂಡು ಅವರಿಗೆ ಅನ್ನ ನೀರು ನೀಡದೆ ಎಸ್ಟೇಟ್ ಗಳಿಂದ ಕಳಿಸುತ್ತಿರುವ ಘಟನೆಗಳು ನಡೆಯುತ್ತಿವೆ.
ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ಸೋಮನಹಳ್ಳಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಗರಿಬೊಮ್ಮನಹಳ್ಳಿಯ 22 ವಲಸೆ ಕಾರ್ಮಿಕರನ್ನು ವಶಕ್ಕೆ ಪಡೆದು ಅವರಿಗೆ ಸರ್ಕಾರಿ ಹಾಸ್ಟೇಲ್‌ನಲ್ಲಿ ನಿರ್ಮಿಸಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಬಿಡಲಾಗಿದೆ. 22 ವಲಸೆ ಕಾರ್ಮಿಕರು ಬಿಕ್ಕೋಡು ಬಳಿಯ ಸೋಮನಹಳ್ಳಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಲಾಕ್‌ಡೌನ್ ಆದ ಬಳಿಕ ಕೂಲಿ ಕಾರ್ಮಿರು ಹತ್ತು ದಿನಗಳಿಂದ ಅನ್ನ ನೀರು ಇಲ್ಲದೇ ಪರದಾಡಿದರು. ಕೆಲಸ ಮಾಡಿಸಿಕೊಂಡ ಎಸ್ಟೇಟ್ ಮಾಲಿಕ ಇವರನ್ನು ಹತ್ತು ದಿನಗಳ ಬಳಿಕ ಹೊರಹಾಕಿದ್ದಾನೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಮೂರು ದಿನದ ಹಸುಗೂಸು, ಬಾಣಂತಿ, ಆರು ಪುಟ್ಟ ಮಕ್ಕಳು ಸೇರಿದಂತೆ 22 ಜನರು ಗೂಡ್ಸ್‌ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿಳಬಾರದು ಎಂದು ಚೀಲದಲ್ಲಿ ಅವಿತುಕೊಂಡು ಚಿಕ್ಕಮಗಳೂರು ಕಡೆ ಕೂಲಿ ಅರಸಿಕೊಂಡು ಬಂದಿದ್ದರು.
ಶುಕ್ರವಾರ ರಾತ್ರಿ ನಗರದ ಹೊರವಲಯದ ಹಿರೇಮಗಳೂರು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೂಲಿ ಕಾರ್ಮಿಕರನ್ನು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿದ್ದಾರೆ. ಎಸ್ಟೇಟ್ ಮಾಲೀಕರ ವರ್ತನೆಗೆ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ. ಲಾಕ್‌ಡೌನ್ ಬಳಿಕ ಅನಗತ್ಯ ಸಂಚಾರಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಿದ್ದು, ತುರ್ತು ಸೇವೆಗೆ ಜಿಲ್ಲಾಡಳಿತ ನೀಡಿದ ಪಾಸ್ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನಕಲಿ ಕರ್ಫ್ಯೂಪಾಸ್, ವಾಹನ ಪಾಸ್ ಗಳನ್ನು ಐನೂರು ಸಾವಿರಕ್ಕೆ ಮಾರಾಟ ದಂಧೆ ನಡೆಸುತ್ತಿದ್ದಾರೆ. ಶನಿವಾರ ನಕಲಿ ಕರ್ಫ್ಯೂ ಪಾಸ್ ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಯುವಕ ಮತ್ತು ಗ್ರಾಹಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.