ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಗ್ರಾಮದ ದಲಿತ ಕಾಲೋನಿಯ ಭಾಗ್ಯಮ್ಮ ಮತ್ತು ಅವರ ಮಗ ಈಶ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ತಾಯಿ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಭಾಗ್ಯಮ್ಮ ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಆಸ್ಪತ್ರೆಗೆ ಬೇಟಿ ನೀಡಿ ಭಾಗ್ಯಮ್ಮ ಅವರ ಬಳಿ ಘಟನೆಯ ಕುರಿತು ವಿಚಾರಿಸಿದಾಗ ಗ್ರಾಮದ ಕೆಲವರು ಏಕಾಏಕಿ
ಮನೆಗೆ ನುಗ್ಗಿ ನನಗೆ ಮತ್ತು ನನ್ನ ಮಗನಿಗೆ ಹೊಡೆದಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಶಾಸಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಮೂಲಕ ಘಟನೆಯ ವಿವರ ತಿಳಿಸಿ ತಪ್ಪಿತಸ್ಥರ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಎಸ್.ಸಿ ಎಸ್.ಟಿ ವಕ್ತಾರ ನಂಜುಡಯ್ಯ ಮಾತನಾಡಿ, ದಲಿತ ಯುವಕರ ಮೇಲೆ ಜಿಲ್ಲೆಯ ಕೆಲವು ಭಾಗದಲ್ಲಿ ಏಕಾಏಕಿ ಹಲ್ಲೆ ಮಾಡುತ್ತಿದ್ದಾರೆ. ಮಲ್ಲಂದೂರಿನ ದಲಿತ ಕಾಲೋನಿಯಲ್ಲಿ ಈ ರೀತಿಯ ಘಟನೆ ನೆಡೆದಿದೆ.
ತಕ್ಷಣ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮೈಲಿಮನೆ ಪೂರ್ಣೇಶ್, ಹೆಡದಾಳ್ ಸಂಪತ್, ಬಸರವಳ್ಳಿ ರವಿ, ಎನ್. ಎಂ.ಮಂಜುನಾಥ್, ಮಹೇಂದ್ರ, ಗಿರೀಶ್, ನಾಗರಾಜ್ ಉಪಸ್ಥಿತರಿದ್ದರು.