ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಅಗ್ರಸ್ಥಾನ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಶೈಕ್ಷಣಿಕ ಕೇಂದ್ರ ಮಾಡಲು ಶ್ರಮಿಸಿದ ಜಿಪಂ ಸಿಇಒ ಫೌಝೀಯಾ ತರುನ್ನುಮ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಪಿ.ಶಿವಶಂಕರ್ ಅವರನ್ನು ಮುಂದಿನ ಆದೇಶವರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಆದರೇ ಜಿಲ್ಲೆಯಲ್ಲಿ ಖಡಕ್ ಜಿಪಂ ಸಿಇಒ ಆಗಿ ಸೇವೆ ಸಲ್ಲಿಸಿದ ಫೌಝೀಯಾ ತರುನ್ನುಮ್ ಅವರಿಗೆ ವರ್ಗಾವಣೆಯ ಸ್ಥಳವನ್ನು ಸಹ ತೋರಿಸಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜ್ಯದಲ್ಲಿ ಮಾದರಿ ಮಾಡಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಜಿಪಂ ಸಿಇಒ ಫೌಝೀಯಾ ತರುನ್ನುಮ್ ತಮ್ಮ ಕಾರ್ಯವೈಖರಿಯ ಮೂಲಕ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದರು ಸತತ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿ ಮಜಿನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಮಳೆ ನೀರು ಸಂರಕ್ಷಣೆ ಮಾಡುವ ಬಹುಕಮಾನ್ ಚೆಕ್‍ಡ್ಯಾಂಗಳು, ರೈತರ ಹೊಲದಲ್ಲಿ ಬದುಗಳು, ಮಾದರಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು, ಶಾಲಾ ವಿದ್ಯಾರ್ಥಿಗಳಿಗೆ ಭದ್ರತೆಗಾಗಿ ಕಾಂಪೌಂಡ್ ನಿರ್ಮಾಣ, ಡಿಜಿಟಲ್ ಗ್ರಂಥಾಲಯಗಳು, ಗ್ರಾಮೀಣ ಉದ್ಯಾವನಗಳು, ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಭಿವೃಧ್ಧಿಗೊಳಿಸಲು ಶ್ರಮಿಸಿದ ಜಿಪಂ ಸಿಇಓ ಅವರ ದಿಡೀರ್ ವರ್ಗಾವಣೆ ಬಗ್ಗೆ ಜಿಲ್ಲೆಯಲ್ಲಿ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಿಸಲು ಹೋದ ಸ್ಥಳದಲ್ಲಿ ಜನರಿಗೆ ಜಾಗೃತಿ ಮೂಡಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಸಹಾಯವಾಣಿ ಕೇಂದ್ರವನ್ನು ತೆರೆದು ಜನರಿಗೆ ಅನುಕೂಲ ಕಲ್ಪಿಸುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಅಭಿವೃಧ್ಧಿ ಅಧಿಕಾರಿಗಳು, ಗ್ರಾಪಂ ಸದಸ್ಯರು,ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಒಳಗೊಂಡಂತೆ ಕೋವಿಡ್ 19 ಕಾರ್ಯಪಡೆಯನ್ನು ರಚಿಸಿ ಜನರಲ್ಲಿ ಆತ್ಮಸ್ಥೈರ್ಯ ತುಂಬಿಸಿದ ಜಿಪಂ ಸಿಇಒ ಅವರನ್ನು ವರ್ಗಾವಣೆ ಮಾಡಿರುವುದರಿಂದ ಸಾರ್ವಜನಿಕರ ವಲಯದಲ್ಲಿ ಸರ್ಕಾರ ನಡೆಯ ಕುರಿತು ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.