ಚಿಕ್ಕಬಳ್ಳಾಪುರ: ಕರ್ನಾಟಕದ ಊಟಿ ಎಂದು ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ನಾಳೆಯಿಂದ ಸಾರ್ವಜನಿಕರಿಗೆ ತೆರೆದಿರುತ್ತವೆ.
ಮಳೆಯ ಆರ್ಭಟದಿಂದ ಮಣ್ಣಿನ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿದು ಹೋಗಿದ್ದ ಹಿನ್ನೆಲೆಯಲ್ಲಿ ನಂದಿಗಿರಿಧಾಮದಲ್ಲಿ ಕಳೆದ ಮೂರು ತಿಂಗಳಿಂದ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಪ್ರಾಕೃತಿಕ ಸೊಬಗನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ನಂದಿಗಿರಿಧಾಮದ ದರ್ಶನ ಮಾಡಲು ಸಹಸ್ರಾರು ಪ್ರವಾಸಿಗರು ಕಾಯುತ್ತಿದ್ದರು ಇದೀಗ ಕಾಲ ಕೂಡಿ ಬಂದಿದ್ದು ಜಿಲ್ಲಾಡಳಿತ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬುಧವಾರದಿಂದ ನಂದಿಗಿರಿಧಾಮದಲ್ಲಿ ಪ್ರವೇಶ ಕಲ್ಪಿಸಲು ಮುಂದಾಗಿದೆ.
ಕಳೆದ ಆಗಸ್ಟ್ 25 ರಂದು ಮಳೆಯ ಆರ್ಭಟಕ್ಕೆ ರಸ್ತೆ ಕುಸಿದಿತ್ತು. ತದನಂತರ ನಂದಿಗಿರಿಧಾಮದಲ್ಲಿ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ನಂತರ ಗಿರಿಧಾಮದಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು.
ರಾಜ್ಯ ಸರ್ಕಾರ ನಂದಿಗಿರಿಧಾಮದಲ್ಲಿ ಕುಸಿದಿರುವ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಎಂಬತ್ತು ಲಕ್ಷ ರೂಗಳನ್ನು ಬಿಡುಗಡೆ ಮಾಡಿದ್ದು ಅದರಂತೆಯೇ ಕಳೆದ ಎರಡು ತಿಂಗಳಿಂದ ಕಾಮಗಾರಿಯನ್ನು ಕೈಗೆತ್ತಿಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ನಾಳೆಯಿಂದ ನಂದಿಗಿರಿಧಾಮದಲ್ಲಿ ಪ್ರವಾಸಿಗರಿಗೆ ಅವಕಾಶ ಸಿಗಲಿದೆ.
ಹಿಂದಿನ ಸೂಚನೆಗಳ ಪ್ರಕಾರ ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಸಾರ್ವಜನಿಕರಿಗೆ ನಿರ್ಭಂದ ಹೇರಲಾಗಿತ್ತು. ಆದರೆ ಈ ಬಾರಿ ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟದ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಅವರು ತಿಳಿಸಿದ್ದಾರೆ.