ಚಿಕ್ಕಬಳ್ಳಾಪುರ: ಸರಳ ಸಜ್ಜನಿಕೆಯ ರಾಜಕಾರಣಿ, ಮಾಜಿ ರಕ್ಷಣಾ ಸಚಿವ ಕರ್ನಾಟಕದ ಮಂಗಳೂರು ಮೂಲದ ಜಾರ್ಜ್ ಫೆರ್ನಾಂಡಿಸ್ ಮಂಗಳವಾರ ತಮ್ಮ 88ನೇ ವಯಸ್ಸಿ ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ಸಮಾಜವಾದಿಯ ಚಿಂತಕ ಚಿಕ್ಕಬಳ್ಳಾಪುರಕ್ಕೂ ನಂಟು ಹೊಂದಿದ್ದರು. ಕಾಂಗ್ರೆಸ್ ಪಾಲಿಗೆ ಭದ್ರಕೋಟೆಯಾಗಿದ್ದ ಅಂದಿನ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜನತಾ ಪರಿವಾರದ ಬೀಜ ಬಿತ್ತಿ ಹೋದ ಕೀರ್ತಿ ಸಮಾಜವಾದಿ ಚಿಂತಕ, ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್‌ಗೆ ಸಲ್ಲುತ್ತದೆ.
ಹೌದು, ತಮ್ಮ ಬದುಕಿನುದ್ದಕ್ಕೂ ಕಾಂಗ್ರೆಸ್ ವಿರೋಧಿ ಪಾಳೆಯದಲ್ಲಿಯೇ ರಾಜಕಾರಣ ಮಾಡಿ ಕಾರ್ಮಿಕರ ಶಕ್ತಿಯಾಗಿ, ಸಮಾಜವಾದಿ, ಲೋಹಿಯಾ ವಾದಿ ಹಾಗೂ ಸಮತವಾದಿಯಾಗಿ ದೇಶ ಕಂಡ ಅಪರೂಪದ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ 70ರ ದಶಕದಲ್ಲಿಯೇ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಇಲ್ಲಿ ಕಾಂಗ್ರೆಸ್ ವಿರುದ್ಧ ಜನತಾ ಪರಿವಾರವನ್ನು ಬಲ ಗೊಳಿಸಿದ್ದರು.
1975ರಲ್ಲಿ ಭೇಟಿ: ಚಿಕ್ಕಬಳ್ಳಾಪುರ ಅಂದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಜನತಾ ಪರಿವಾರದ ನಾಯಕರು ರಾಜ್ಯದಲ್ಲೇ ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಇದ್ದರು. ಎಲ್ಲಿ ನೋಡಿದರೂ ಕಾಂಗ್ರೆಸ್ ಪಕ್ಷದ್ದೇ ಹವಾ ಇರುತ್ತಿತ್ತು. ಆದರೆ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜನತಾ ಪರಿವಾರ ಬಲಗೊಳಿಸಿದ್ದು ಮಾತ್ರ ಜಾರ್ಜ್ ಫೆರ್ನಾಂಡಿಸ್ ಎಂದು ಇಂದಿಗೂ ಜಿಲ್ಲೆಯ ಹಿರಿಯ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಹೆಮ್ಮೆಯಿಂದ ಹೇಳುತ್ತಾರೆ.
1975 ರಲ್ಲಿ ಚಿಕ್ಕಬಳ್ಳಾಪುರ ಪುರಸಭೆಯ ನಾಲ್ಕು ಡಿವಿಜನ್‌ಗಳಿಗೆ ಘೋಷಣೆಯಾಗಿದ್ದ ಚುನಾವಣೆ ಯಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಜಾರ್ಜ್ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ದ್ದರು. ಅಂದು ಈಗಿನ ಬಲಮುರಿ ವೃತ್ತದಲ್ಲಿ ಜನತಾ ಪರಿವಾರದ ಪರ ಚುನಾವಣಾ ಅಖಾಡಕ್ಕೆ ಇಳಿದಿದ್ದ ಅಭ್ಯರ್ಥಿಗಳ ಪರ ಜಾರ್ಜ್ ಪ್ರಚಾರ ನಡೆಸಿ ಹೋಗಿದ್ದರು. ಆಗ ಜನತಾ ಪರಿವಾರದ ಹಿರಿಯ ಮುಖಂಡರಾದ ಕ್ಷೇತ್ರದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರವರ ತಂದೆ ಕೆ.ಬಿ.ಪಿಳ್ಳಪ್ಪ, ಕೆ.ಎಂ.ಪುಟ್ಟಸ್ವಾಮಿ ಮತ್ತಿತರರು ಜಾರ್ಜ್‌ರನ್ನು ಕರೆಸಿದ್ದರು.
ಜಾರ್ಜ್ ಫೆರ್ನಾಂಡಿಸ್ ನಾಡು ಕಂಡ ಅಪ್ರತಿಮ ಸಮಾಜವಾದಿ ಚಿಂತಕ. ಮೂಲತಃ ಮಂಗಳೂರಿನವರಾದ ಇವರು ಕೆಸಲದ ನಿಮಿತ್ತ ಬಾಂಬೆಗೆ ಅಲ್ಲಿ ಕಾರ್ಮಿಕ ಸಂಘಟನೆ ಹಾಗೂ ಹೋರಾಟದಲ್ಲಿ ಮುಂಚೂಣಿಗೆ ಬಂದರು. ಅಂದಿನ ಪ್ರಭಾವಿ ನಾಯಕ ದತ್ತಸಾಮಂತ್‌ರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಸಂಸತ್‌ಗೆ ಪ್ರವೇಶ ಮಾಡಿದ್ರು ಎಂದು ಸೋಮಶೇಖರ್ ವಿವರಿಸಿದರು.