Advertisement

ಕೊರತೆ ಮಧ್ಯೆ ಚಿಕ್ಕಲ್ಲೂರು ಜಾತ್ರೆ ಸಂಪನ್ನ

03:00 PM Jan 11, 2023 | Team Udayavani |

ಚಾಮರಾಜನಗರ: ಐದು ದಿನ ನಡೆದ ಚಿಕ್ಕಲ್ಲೂರು ಜಾತ್ರೆ ಮಂಗಳವಾರ ಮುತ್ತುರಾಯನ ಸೇವೆಯೊಂದಿಗೆ ಸಂಪನ್ನಗೊಂಡಿತು.

Advertisement

ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಜಾತ್ರೆ ಸರಳವಾಗಿ ನಡೆದಿತ್ತು. ಈ ಬಾರಿ ಲಕ್ಷಾಂತರ ಭಕ್ತರು ಸಂಭ್ರಮದಿಂದ ಪಾಲ್ಗೊಂಡರು. ಪಂಕ್ತಿ ಸೇವೆಯಂದು ನಡೆಯುವ ಮಾಂಸಾಹಾರ ನೈವೇದ್ಯ ಸೇವೆ ತಮ್ಮ ಹಕ್ಕು ಎಂದು ಭಕ್ತರು ಹೇಳಿದ್ರೆ, ಪ್ರಾಣಿ ಕಲ್ಯಾಣ ಮಂಡಳಿ, ಕೋರ್ಟ್‌ ಆದೇಶದಂತೆ ಪ್ರಾಣಿಗಳ ಹರಣ ತಡೆಯಲು ಜಿಲ್ಲಾಡಳಿತ ಶತಪ್ರಯತ್ನ ನಡೆಸಿತು. ಕೆಲವು ವರ್ಷಗಳಿಂದ ಚಿಕ್ಕಲ್ಲೂರು ಜಾತ್ರೆ ಆರಂಭದಿಂದ ಅಂತ್ಯದವರೆಗೆ ಮಾಂಸಾಹಾರ ಪರ-ವಿರೋಧ ವಾಗ್ವಾದ ನಡೆಯುತ್ತಲೇ ಇದೆ.

ಇದು ಪ್ರಾಣಿಬಲಿ ಅಲ್ಲ: ಜಾತ್ರೆಯಲ್ಲಿ ಪ್ರಾಣಿಬಲಿ ನಿಷಿದ್ಧ, ಸರ್ಕಾರದ ನಿಯಮ, ಕೋರ್ಟ್‌ ಆದೇಶದಂತೆ ಪ್ರಾಣಿಬಲಿ ನಡೆಯಬಾರದು ಎಂದು ಪ್ರಾಣಿ ಕಲ್ಯಾಣ ಮಂಡಳಿ ಆಗ್ರಹಿಸಿದರೆ, ಜಾತ್ರೆಯಲ್ಲಿ ಪ್ರಾಣಿ ಬಲಿ ಇಲ್ಲ. ದೇಗುಲದಲ್ಲಿ ಬಲಿ ಪೀಠ ಇಲ್ಲ. ಭಕ್ತರು ಜಾತ್ರೆ ಮಾಳದಿಂದಾಚೆ ಖಾಸಗಿ ಜಮೀನು, ಹೊಲಗಳಲ್ಲಿ ಡೇರೆ ಹಾಕಿಕೊಂಡು ಸಸ್ಯಾಹಾರ ಅಥವಾ ಮಾಂಸಾಹಾರ ಸೇವಿಸುತ್ತಾರೆ. ಇದು ಪ್ರಾಣಿಬಲಿ ಅಲ್ಲ ಎಂದು ಸಿದ್ದಪ್ಪಾಜಿ ಪರಂಪರೆ ಸಮಿತಿ ಹಾಗೂ ಮಾಂಸಾಹಾರಿ ಭಕ್ತರು ಪ್ರತಿಪಾದಿಸುತ್ತಾರೆ.

ಸರ್ಕಾರದ ಕಾನೂನು, ಕೋರ್ಟ್‌ ಆದೇಶ ಪಾಲನೆ ಮಾಡಲು ಜಿಲ್ಲಾಡಳಿತ ಅನೇಕ ಚೆಕ್‌ಪೋಸ್ಟ್‌ ಸ್ಥಾಪಿಸಿ, ಕುರಿ, ಕೋಳಿ ಚಿಕ್ಕಲ್ಲೂರಿಗೆ ಕೊಂಡೊಯ್ಯದಂತೆ ತಡೆ ಒಡ್ಡುತ್ತದೆ. ಆದರೂ, ಅನೇಕ ಮಂದಿ ಭಕ್ತರು ಪೊಲೀಸರ, ಅಧಿಕಾರಿಗಳ ಕಣ್ತಪ್ಪಿಸಿ ಪ್ರಾಣಿ ಕೊಂಡೊಯ್ದು ಪಂಕ್ತಿಸೇವೆಯಂದು ಮಾಂಸಾಹಾರದ ಅಡುಗೆ ಮಾಡಿ, ನೈವೇದ್ಯ ಅರ್ಪಿಸಿ ಊಟ ಮಾಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಪ್ರಾಣಿಗಳ ಹರಣ ಕಡಿಮೆಯಾಗಿದೆ.

ಭಕ್ತರಿಗೆ ಮೂಲ ಸೌಕರ್ಯದ ಕೊರತೆ: ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯ ಖಾಸಗಿ ಟ್ರಸ್ಟ್‌ ಆಡಳಿತಕ್ಕೆ ಒಳಪಟ್ಟಿದೆ. ಪ್ರತಿ ವರ್ಷ ಚಿಕ್ಕಲ್ಲೂರು ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಕಾಣಿಕೆ ಸಲ್ಲಿಸುತ್ತಾರೆ. ಆದರೆ, ದೇವಾಲಯದ ಆವರಣದಲ್ಲಿ ಭಕ್ತರಿಗೆ ಮೂಲ ಸೌಲಭ್ಯ ಸಮರ್ಪಕವಾಗಿ ಕಲ್ಪಿಸುವುದಿಲ್ಲ ಎಂಬುದು ಭಕ್ತರ ದೂರು. ಹರಕೆ ಹೊತ್ತವರು ಮುಡಿ ಮಾಡಿಸಲು ಸರಿಯಾದ ಕಟ್ಟೆ, ಮುಡಿ ಕೊಟ್ಟ ನಂತರ ಸ್ನಾನ ಮಾಡಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲ ಎಂದು ಭಕ್ತರು ದೂರಿದರು.

Advertisement

ಇರುವ ಒಂದು ತೊಟ್ಟಿಯಲ್ಲೇ ಅನೇಕರು ಸ್ನಾನ ಮಾಡಬೇಕಾಗಿದೆ. ಮಹಿಳೆಯರು ಸ್ನಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಇಲ್ಲ. ಲಕ್ಷಾಂತರ ಭಕ್ತರು ಬರುವ ಈ ಜಾತ್ರೆಯಲ್ಲಿ ಶೌಚಾಲಯಕ್ಕೆ ತೆರಳಲು ಸೌಕರ್ಯ ಕಲ್ಪಿಸಬೇಕು ಎಂದು ಭಕ್ತರು ಒತ್ತಾಯಿಸಿದರು.

ಜಾತ್ರೆ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ನಡೆಸುವ ಸಭೆಯಲ್ಲಿ ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ಸಕಲ ವ್ಯವಸ್ಥೆ ಕೈಗೊಳ್ಳಿ. ಕುಡಿವ ನೀರಿನ ವ್ಯವಸ್ಥೆಗೆ ಯಾವುದೇ ತೊಂದರೆ ಆಗಬಾರದು. ಹೆಚ್ಚು ನಲ್ಲಿ ಅಳವಡಿಸಿ ನೀರಿನ ಪೂರೈಕೆ ಮಾಡಬೇಕು. ಶೌಚಾಲಯ ತೆರೆಯಬೇಕು. ವಿಶೇಷವಾಗಿ ಸ್ವತ್ಛತಾ ಕೆಲಸ ಆಗಬೇಕು. ಜಾತ್ರೆ ಆರಂಭ ಆಗುವ ಮುಂಚೆಯೇ ದೇವಾಲಯ, ಜಾತ್ರಾ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಬೇಕು. ಜಾತ್ರೆ ಮುಗಿದ ನಂತರವು ಸ್ವಚ್ಛತಾ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಆರ್‌.ನರೇಂದ್ರ ಸೂಚನೆ ನೀಡಿದ್ದರು. ಆದರೆ, ಅದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರಲಿಲ್ಲ.

ಗೋಲಕ ಹಣ ಸೌಲಭ್ಯಕ್ಕೆ ಬಳಕೆ: ದೇಗುಲದ ಖಾಸಗಿ ಟ್ರಸ್ಟ್‌ನವರು ಶುಲ್ಕ ಸಂಗ್ರಹಿಸುತ್ತಿದ್ದಾರೆ. ಅಲ್ಲದೆ, ಜನರು ಹುಂಡಿಗೆ ಕಾಣಿಕೆ ಸಲ್ಲಿಸುತ್ತಾರೆ. ಇದರಿಂದ ಬಂದ ಹಣದಲ್ಲಿ ಟ್ರಸ್ಟ್‌ ಒಂದಂಶ ಇಟ್ಟುಕೊಂಡು, ಉಳಿದ ಹಣ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳಿಗೆ ಬಳಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದರು.

ಇಲ್ಲಿಯವರೆಗೆ ಹುಂಡಿಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿಯುತ್ತಿರಲಿಲ್ಲ. ಮೊದಲಿಗೆ ಗೋಲಕದ ಹಣ ಎಷ್ಟು ಬರುತ್ತದೆ ಎಂಬುದು ಗೊತ್ತಾಗಬೇಕು. ಅದಕ್ಕಾಗಿ ಈ ಬಾರಿ ತಹಶೀಲ್ದಾರ್‌ ನೇತೃತ್ವದಲ್ಲಿ ಗೋಲಕ ಹಣ ಎಣಿಕೆ ನಡೆಸಲು ಆದೇಶಿಸಲಾಗಿದೆ. ಜಿಲ್ಲಾಡಳಿತದಿಂದ ಗೋಲಕ ಸೀಲ್‌ ಮಾಡಲಾಗಿದೆ. ಎಣಿಕೆ ನಂತರ ಎಷ್ಟು ಸಂಗ್ರಹವಾಗಿದೆ ಎಂಬುದು ತಿಳಿಯುತ್ತದೆ. ಇದರಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಣ ವಿನಿಯೋಗಿಸುವಂತೆ ಸೂಚಿಸಲಾಗುವುದು.

ದೇವಸ್ಥಾನದ ಆಡಳಿತ ಮಂಡಳಿ ಮುಡಿಸೇವೆ, ವಾಹನ ಶುಲ್ಕ, ಜಾತ್ರೆಯ ಅಂಗಡಿಗಳ ಶುಲ್ಕ, ನೀಲಗಾರ ದೀಕ್ಷೆ ಸೇರಿ ಪ್ರತಿಯೊಂದಕ್ಕೂ ಬೆಲೆ ಹೆಚ್ಚಳ ಮಾಡಿದೆ. ಆದರೆ, ಜಾತ್ರೆಗೆ ಬರುವ ಭಕ್ತರಿಗೆ ಸೂಕ್ತ ಸೌಲಭ್ಯ ಒದಗಿಸಿಲ್ಲ. ಇದರಿಂದ ತೊಂದರೆ ಆಗುತ್ತಿದೆ. – ನಾಗೇಗೌಡ, ರಾಮನಗರದ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next