Advertisement

ಮಹಿಳಾ ದಿನಾಚರಣೆ ವಿಶೇಷ : ಪತಿ ಆಸರೆ ಕಳೆದುಕೊಂಡರೂ ಕೃಷಿಯಲ್ಲಿ ಸಾಧನೆ

03:04 PM Mar 08, 2021 | Team Udayavani |

ಇಂದಿಗೂ ಎಲೆ ಮರೆಯ ಕಾಯಿಯಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಸಮಾಜಕ್ಕೆ ಬೆಳಕಾಗಿ ದುಡಿಯುತ್ತಿದ್ದಾರೆ. ಯಾವುದೇ ಪ್ರಚಾರವಿಲ್ಲದೇ ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬ ನಿರ್ವಹಣೆ ಜತೆಗೆ ಸಮಾಜದ ಉನ್ನತಿಗೂ ಶ್ರಮಿಸುತ್ತಿದ್ದಾರೆ. ನಿಟ್ಟಿನಲ್ಲಿ ಮಹಿಳೆಯರ ಸೇವೆ ಸ್ಮರಿಸಲು ವಿಶ್ವದಾದ್ಯಂತ ಮಾ.8ಕ್ಕೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಕುರಿತು ಅಂತವರ ಸಾಧನೆ ಕುರಿತು ವಿಶೇಷ ವರದಿ.

Advertisement

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ ಎನ್ನುವ ಮಾತುಗಳು ನಾವೆಲ್ಲರು ಕೇಳುತ್ತಿದ್ದೇವೆ. ಈ ಮಧ್ಯೆ ರಾಜಕೀಯವಾಗಿ ಮೀಸಲಾತಿ ಚುನಾಯಿತರಾಗುವ ಮಹಿಳೆಯರ ಗಂಡಂದಿರು ದರ್ಬಾರ್‌ ಮಾಡುತ್ತಿರುವುದು ಸರ್ವೆ ಸಾಮಾನ್ಯ.

ಆದರೆ ಪತಿಯ ಆಸರೆಯನ್ನು ಕಳೆದುಕೊಂಡವರು ಗ್ರಾಮಸ್ಥರ ಸಹಕಾರದಿಂದ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಕೃಷಿಕರಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸಕ್ರಿಯವಾಗಿ ಹೋರಾಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ ರೈತ ಮಹಿಳೆ ರೇಣುಕಮ್ಮ.

ಹೌದು, ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದ್ದಾರೆ. ಮೂಲತಃ ಆನೇಕಲ್‌ ತಾಲೂಕು ಜಿಗಣಿ ಹೋಬಳಿ ಹುಲ್ಲಹಳ್ಳಿ ಗ್ರಾಮದವರು ಆದ ರೇಣುಕಮ್ಮ ಅವರನ್ನು 1983ರಲ್ಲಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗುಂಡ್ಲಹಳ್ಳಿ ಗ್ರಾಮದ ರಾಮರೆಡ್ಡಿ ಅವರೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಮದುವೆಯಾದ 15 ವರ್ಷದಲ್ಲಿ ಹೃದಯಘಾತ ದಿಂದ ರಾಮರೆಡ್ಡಿ ನಿಧನ ಹೊಂದಿದ್ದರು. ಛಲಬಿಡದ ಅತ್ತೆ ಅವರ ಸಹಕಾರ ಮತ್ತು ಸಹಾಯದಿಂದ ಇರುವ ಜಮೀನಿನಲ್ಲಿ ವ್ಯವಸಾಯ ಮಾಡಿ ಮಕ್ಕಳೊಂದಿಗೆ ನಾದಿನಿ ಮಕ್ಕಳನ್ನು ಸಹ ಪೋಷಣೆ ಮಾಡಿ ವಿದ್ಯಾದಂತರನ್ನಾಗಿಸಿ ಅವರ ವಿವಾಹಗಳನ್ನು ಮಾಡಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ.

ಸುಮಾರು 10 ಎಕರೆ ಜಮೀನಿನಲ್ಲಿ ಕಬ್ಬು, ರಾಗಿ, ಭತ್ತ, ಕಡಲೇಕಾಯಿ, ಜೋಳ, ತೊಗರಿ, ಅವರೇ ಸಹಿತ ಮಿಶ್ರ ಬೆಳೆ ಬೆಳೆದು 2 ಎಕರೆ ಪ್ರದೇಶದಲ್ಲಿ ಸೀಬೆಹಣ್ಣು,3 ಎಕರೆ ಪ್ರದೇಶದಲ್ಲಿ ಗೋಡಂಬಿ ಬೆಳೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.

Advertisement

ಹ್ಯಾಟ್ರಿಕ್‌ ಗೆಲುವು: ಗೌರಿಬಿದನೂರು ತಾಲೂಕಿನ ನಾಮಗುಂಡ್ಲು ಗ್ರಾಪಂನ ಗುಂಡ್ಲಹಳ್ಳಿ ಕ್ಷೇತ್ರದಲ್ಲಿ 2005 ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ನಂತರ 2010, 2015 ರಲ್ಲಿ ಸತತವಾಗಿ ಗೆಲುವು ಸಾಧಿಸಿ ರೈತ ಮಹಿಳೆಯ ಜೊತೆಗೆ ರಾಜಕೀಯ ನಾಯಕಿಯಾಗಿ ಸಹ ಬೆಳೆದಿದ್ದಾರೆ. ಮೊದಲ ಚುನಾವಣೆಗೆ 1 ಸಾವಿರ ಮತಕ್ಕೆ 850 ಮತಗಳು ಬಂದಿದ್ದವು. ನಂತರ ಸಹ ಬಹುಮತದೊಂದಿಗೆ ಗೆಲುವು ಸಾಧಿಸಿಕೊಂಡು ಬಂದು ಗ್ರಾಮದಲ್ಲಿ ಸಮಸ್ಯೆಗಳನ್ನು ಪರಿಹರಿಸಲುಆದ್ಯತೆ ನೀಡಿ ಎಲ್ಲರ ಪ್ರೀತಿಯ ಹೆಣ್ಣು ಮಗಳಾಗಿ ಬೆಳೆದಿರುವುದು ಮತ್ತೂಂದು ವಿಶೇಷ.

ಸುಗ್ರಾಮ ಸಂಘಟನೆ ರಚನೆ: ಮೀಸಲಾತಿ ಅಥವಾ ಅವಕಾಶ ಲಭಿಸಿದಾಗ ಸ್ಥಳೀಯ ಸಂಸ್ಥೆಗಳಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತು ಅಧಿಕಾರ ಚಲಾಯಿಸಬೇಕೆಂದು ಹಠಕ್ಕೆ ಬಿದ್ದು ಮಹಿಳಾ ಗ್ರಾಪಂ ಸದಸ್ಯರನ್ನು ಸಂಘಟಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಸುಗ್ರಾಮ ಎಂಬ ಸಂಘಟನೆಯನ್ನು ರಚಿಸಿಕೊಂಡು ಸಂಸ್ಥಾಪಕ ಅಧ್ಯಕ್ಷೆಯಾಗಿ ರೇಣುಕಾಮ್ಮ ಸೇವೆ ಸಲ್ಲಿಸಿದ್ದಾರೆ.

ಕಲಿಕಾ ಪ್ರವಾಸ: ಗ್ರಾಪಂ ಸದಸ್ಯರಾಗಿ ಸಮಾಜಸೇವೆ ಮಾಡಿರುವ ರೇಣುಕಮ್ಮ ನಂತರ ಹಿಂದಕ್ಕೆ ನೋಡಿಲ್ಲ. ಅಸೆಡಾ ಸಂಸ್ಥೆಯವರು ನೀಡಿದ ಸಹಕಾರ ಮತ್ತು ಪ್ರೋತ್ಸಾಹ ನೆನಪು ಮಾಡಿಕೊಂಡು ಹಂಗರ್‌ ಪ್ರಾಜೆಕ್ಟ್ ಸಂಸ್ಥೆಗಳ ಮೂಲಕ ಸ್ವೀಡೆನ್‌ ದೇಶಕ್ಕೆ ಕಲಿಕಾ ಪ್ರವಾಸಕ್ಕೆ ತೆರಳಿ ಅಲ್ಲಿನ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದರು.

ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಲ್ಲಿನ ಪ್ರಧಾನಮಂತ್ರಿಗಳು ಬಹಳ ಗೌರವಿಸಿದರು. ಇದರ ಜೊತೆಗೆ ಆಯುಕ್ತರನ್ನು ಭೇಟಿ ಮಾಡಿದ್ದೇವೆಎಂದು ನೆನಪಿಸಿ ಆ ದೇಶದಲ್ಲಿ ಹೈನುಗಾರಿಕೆಯಲ್ಲಿತೊಡಗಿಸಿಕೊಂಡಿರುವ 4 ಮಂದಿ 400 ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಹೊಸ ಹೊಸ ಪದ್ಧತಿ ಮತ್ತು ತಂತ್ರಜ್ಞಾನ ಬೆಳೆಸಿಕೊಳ್ಳಬೇಕು. ನಮ್ಮ ಭಾಗದ ರೈತರು ಸಹ ಮತ್ತಷ್ಟು ಪ್ರಗತಿ ಸಾಧಿಸಬೇಕೆಂದು ರೈತ ಮಹಿಳೆ ರೇಣಕಮ್ಮ ಎಂದು ತಮ್ಮ ಪ್ರವಾಸದ ಅನುಭವವನ್ನು ಉದಯವಾಣಿಯೊಂದಿಗೆ ಹಂಚಿಕೊಂಡರು.

ಶಾಶ್ವತ ನೀರಾವರಿ ಹೋರಾಟಗಾರ್ತಿ: ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದೆಂದು ತೋರಿಸಿ ಕೊಟ್ಟಿರುವ ರೈತ ಮಹಿಳೆ ರೇಣುಕಮ್ಮ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನೀರಾವರಿ ಸೌಲಭ್ಯವಿಲ್ಲ. ಪ್ರಸ್ತುತ ಬೆಂಗಳೂರಿನ ತ್ಯಾಜ್ಯ ನೀರನ್ನು ಜಿಲ್ಲೆಗೆ ಹರಿಸಲಾ ಗುತ್ತಿದೆ. ತ್ಯಾಜ್ಯ ನೀರು ಮೂರು ಹಂತದಲ್ಲಿ ಸಂಸ್ಕರಿಸಿ ಹರಿಸಿದರೆ ಜನರ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಸರ್ಕಾರ ವಿಶೇಷ ಕಾಳಜಿ ವಹಿಸಿ ಮಾಡಬೇಕು. ಮಹಿಳೆಯರು ತಾಳ್ಮೆ ಕಾಪಾಡಿಕೊಂಡರೆ ಅವಕಾಶಗಳು ಲಭಿಸುತ್ತದೆ. ರೇಣುಕಮ್ಮ, ಕೃಷಿಕ ಮಹಿಳೆ

 

 

ಎಂ.ಎ. ತಮೀಮ್‌ಪಾಷ

Advertisement

Udayavani is now on Telegram. Click here to join our channel and stay updated with the latest news.

Next