Advertisement

ಚಿಕ್ಕಬಳ್ಳಾಪುರ, ಶಿಡ್ಲಘಟ್ಟ “ಕೈ” ಟಿಕೆಟ್‌ ಕಗ್ಗಂಟು

12:43 PM Mar 27, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಉಳಿದಂತೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಗೊಂದಲ ಮುಂದುವರಿದಿದೆ.

Advertisement

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಮಂತ್ರಿ ಆಗಿರುವ ಡಾ.ಕೆ ಸುಧಾಕರ್‌ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಲುವಾಗಿ ಕಾಂಗ್ರೆಸ್‌ ಅಭ್ಯರ್ಥಿಯ ಘೋಷಣೆ ವಿಳಂಬವಾಗಿದೆ. ಇದರಿಂದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿ ಈಗಾಗಲೇ ಕೆಪಿಸಿಸಿ ಸದಸ್ಯ ವಿನಯ್‌ ಎನ್‌. ಶ್ಯಾಮ್‌, ಜಿಪಂ ಮಾಜಿ ಅಧ್ಯಕ್ಷ ಗಂಗರ ಕಾಲುವೆ ನಾರಾಯಣಸ್ವಾಮಿ, ಹಿರಿಯ ವಕೀಲ ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್‌, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ರಘು ಅವರು ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.

ಕೊತ್ತೂರು ಪರ ಹೇಳಿಕೆ: ಈ ಮಧ್ಯೆ ಚಿಕ್ಕಬಳ್ಳಾಪುರ ಕ್ಷೇತ್ರದ ಕೆಲ ಕಾಂಗ್ರೆಸ್‌ ನಾಯಕರು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರನ್ನು ಕಣಕ್ಕಿಳಿಸಲು ಕೆಪಿಸಿಸಿ ಕಚೇರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ವೇಳೆಯಲ್ಲೂ ನಾಯಕರ ಮೇಲೆ ಒತ್ತಡ ಹೇರಿದ್ದರು.

ಪ್ರದೀಪ್‌ ಈಶ್ವರ್‌ ಅಭ್ಯರ್ಥಿ ಮಾಡಲು ಯತ್ನ: ಮತ್ತೂಂದೆಡೆ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ. ಹೀಗಾಗಿ ಅವರ ಅನುಮತಿ ಇಲ್ಲದೆ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಇವರ ನಡೆಯಿಂದ ಕೆಂಗೆಟ್ಟ ಕೆಲ ನಾಯಕರು, ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಬಲಿಜಿಗ ಸಮುದಾಯಕ್ಕೆ ಸೇರಿದ ಪ್ರದೀಪ್‌ ಈಶ್ವರ್‌ ಅವರನ್ನು ಅಭ್ಯರ್ಥಿ ಮಾಡಲು ಹೊರಟಿದ್ದಾರೆ.

ಗೊಂದಲ ಮುಂದುವರಿದಿದೆ: ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದ ಪ್ರದೀಪ್‌ ಈಶ್ವರ್‌ ಅವರು, ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ ಎಂದು ಹೇಳಿ ಅಚ್ಚರಿ ಮೂಡಿಸಿದರು. ಜೊತೆಗೆ ಜಿಲ್ಲೆಯ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರುವ ಮುನ್ಸೂಚನೆಯನ್ನು ನೀಡಿದರು. ಒಟ್ಟಾರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಗೊಂದಲ ಮತ್ತಷ್ಟು ಕಗ್ಗಂಟಾಗಿ ಉಳಿದಿದೆ.

Advertisement

ನಾಲ್ವರು ಆಕಾಂಕ್ಷಿಗಳು: ಜಿಲ್ಲೆಯಲ್ಲಿ ರೇಷ್ಮೆ ನಗರಿ ಎಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ಕ್ಷೇತ್ರದಲ್ಲೂ ಕಾಂಗ್ರೆಸ್‌ ಟಿಕೆಟ್‌ ಗೊಂದಲ ಮುಂದುವರಿದಿದೆ. ಹಾಲಿ ಶಾಸಕ ವಿ. ಮುನಿಯಪ್ಪ, ಎಬಿಡಿ ಸಂಸ್ಥೆ ಅಧ್ಯಕ್ಷ ರಾಜೀವ್‌ಗೌಡ, ಎಸ್‌ಎನ್‌ ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ (ಪುಟ್ಟು), ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ದೊಗರನಾಯಕನಹಳ್ಳಿ ವೆಂಕಟೇಶ್‌ ಕಾಂಗ್ರೆಸ್‌ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಗೋವಿಂದಗೌಡ ಹೆಸರು ಪ್ರಸ್ತಾಪ: ಕ್ಷೇತ್ರದಲ್ಲಿ ಮೂಡಿರುವ ಗೊಂದಲಗಳ ನಡುವೆಯೂ ಕಾಂಗ್ರೆಸ್‌ ಶಾಸಕ ವಿ.ಮುನಿಯಪ್ಪ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಹೆಸರನ್ನು ಘೋಷಣೆ ಮಾಡಿದರು.

ಇದಕ್ಕೆ ಸಹಜವಾಗಿ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿಬಂದವು. ಈ ಮಧ್ಯೆ ಶಾಸಕ ವಿ.ಮುನಿಯಪ್ಪ ಅವರು ಆಂಜಿನಪ್ಪ ಪುಟ್ಟು ಅವರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.

ರಾಜೀವ್‌ಗೌಡ ಜೊತೆ ಗುರುತಿಸಿಕೊಂಡ ಶಾಸಕ: ಕ್ಷೇತ್ರದಲ್ಲಿ ನಡೆದ ಮಹತ್ತರವಾದ ರಾಜಕೀಯ ಬೆಳವಣಿಗೆವೊಂದರಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಆಯೋಜಿಸಿದ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ ಮತ್ತು ಅವರ ಸುಪುತ್ರ ಡಾ.ಶಶಿಧರ್‌ ಮುನಿಯಪ್ಪ ಅವರು ರಾಜೀವ್‌ಗೌಡ ಅವರೊಂದಿಗೆ ಗುರುತಿಸಿಕೊಂಡಿ ರುವುದು ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಮೊದಲು ಬ್ಯಾಲಹಳ್ಳಿ ಗೋವಿಂದಗೌಡ ಅನಂತರ ಆಂಜಿನಪ್ಪ ಪುಟ್ಟು ಇದೀಗ ರಾಜೀವ್‌ಗೌಡ ಪರವಾಗಿ ಶಾಸಕರು ನಿಂತಿರುವುದು, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ. ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು, ಈಗಾಗಲೇ ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ ಪರವಾಗಿ ಬಹಿರಂಗವಾಗಿ ಪ್ರಚಾರಕ್ಕೆ ಇಳಿದಿದ್ದರೂ, ಶಾಸಕ ವಿ.ಮುನಿಯಪ್ಪ ಸಹ ರಾಜೀವ್‌ಗೌಡ ಅವರೊಂದಿಗೆ ಕಾಣಿಸಿಕೊಂಡಿರುವುದು ಬಹುಶಃ ಇನ್ನು ಕೆಲವೇ ದಿನಗಳಲ್ಲಿ ಟಿಕೆಟ್‌ ಗೊಂದಲ ಇತ್ಯರ್ಥವಾಗಲಿದೆ ಎಂಬ ಮುನ್ಸೂಚನೆ ಕಂಡು ಬಂದಿದೆ.

– ತಮೀಮ್‌ಪಾಷ

Advertisement

Udayavani is now on Telegram. Click here to join our channel and stay updated with the latest news.

Next