Advertisement
ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಹಸಿರು ಶಾಲು ಹಾಕಿಕೊಂಡು ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ ಮಾಡಿದ ಯಡಿಯೂರಪ್ಪ ವಿಜಯದ ಸಂಕೇತ ಬೀರಿದರು. ಪ್ರಮಾಣ ಸ್ವೀಕರಿಸುತ್ತಿದ್ದಂತೆ ಗಾಜಿನ ಮನೆಯಲ್ಲಿ ಸೇರಿದ್ದ ಬಿಜೆಪಿ ಶಾಸಕರು, ಮುಖಂಡರ ಕರತಾಡನ ಮುಗಿಲು ಮುಟ್ಟಿತು. ಬಿಜೆಪಿ, ನರೇಂದ್ರ ಮೋದಿ, ಯಡಿಯೂರಪ್ಪ ಪರ ಜಯಘೋಷಗಳು ಮೊಳಗಿದವು. ಐದೇ ನಿಮಿಷದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮುಗಿಯಿತು.
Related Articles
ಸಂಭ್ರಮ ಮುಗಿಲು ಮುಟ್ಟಿತ್ತು. ಬೆಳಗ್ಗೆಯಿಂದಲೇ ರಾಜಭವನದ ಮುಂದೆ ಜಾನಪದ ಕಲಾ ತಂಡಗಳ ಸಮೇತ ಜಮಾಯಿಸಿದ್ದ ಕಾರ್ಯಕರ್ತರು, ಬಿಜೆಪಿ ಪರ ಘೋಷಣೆ ಹಾಕಿ ನೃತ್ಯ ಪ್ರದರ್ಶಿಸಿ ಸಂತಸ ಪಟ್ಟರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಹಸ್ರಾರು ಕಾರ್ಯಕರ್ತರು ರಾಜಭವನದ ಮುಂದೆ ಒಮ್ಮೇಲೆ ಬಂದಿದ್ದರಿಂದ ನೂಕು ನುಗ್ಗಲು ಉಂಟಾಗಿ, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
Advertisement
ಸಂಚಾರ ದಟ್ಟಣೆ: ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ರಾಜಭವನರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ರಾಜಭವನ ರಸ್ತೆ ಮೂಲಕ ಚಾಳುಕ್ಯ ಸರ್ಕಲ್, ಬಳ್ಳಾರಿ ರಸ್ತೆ, ಮಲ್ಲೇಶ್ವರಂ ಭಾಗಗಳಿಗೆ ಹೋಗಬೇಕಾದವರು ಪರದಾಡುವಂತಾಯಿತು.ಕಾμ ಬೋರ್ಡ್ ಬಳಿಯೇ ತಿರುವು ಪಡೆದು ಕನ್ನಿಂಗಹ್ಯಾಂ ರಸ್ತೆ ಮೂಲಕ ಪರ್ಯಾಯ ಮಾರ್ಗ ಅನುಸರಿಸುವಂತಾಯಿತು. ಮುಖದಲ್ಲಿ ಆತಂಕದ ಛಾಯೆ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಅವರ ಮುಖದಲ್ಲಿ ನಗು ಇರಲಿಲ್ಲ.ಮುಂದೇನಾಗುವುದೋ ಎಂಬ ಆತಂಕ ಕಂಡು ಬರುತ್ತಿತ್ತು. ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಸಪ್ಪೆಯಾಗಿಯೇ ಇದ್ದರು. ಸರ್ಕಾರ ರಚನೆಗೆ ಆಹ್ವಾನ ನೀಡಿರುವ ವಿಚಾರ ಸುಪ್ರೀಂಕೋರ್ಟ್
ಮೆಟ್ಟಿಲು ಹತ್ತಿರುವುದು, ಜತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆ ಪ್ರಯತ್ನ ಮುಂದುವರಿಸಿರುವುದರಿಂದ ಯಡಿಯೂರಪ್ಪ ಅವರಲ್ಲಿ ಎಂದಿನ ನಗು ಮಾಯವಾಗಿತ್ತು. ಕೇಂದ್ರ ಸಚಿವರ ಕಾರ್ಯತಂತ್ರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ನಂತರ ಇದೀಗ ಬಹುಮತ ಸಾಬೀತು ಸವಾಲು ಎದುರಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಕೇಂದ್ರ ಸಚಿವರ ದಂಡು ರಾಜಧಾನಿಯಲ್ಲೇ ಬೀಡು ಬಿಟ್ಟಿದೆ. ಜೆ.ಪಿ.ನಡ್ಡಾ,ಪ್ರಕಾಶ್ ಜಾವಡೇಕರ್, ಧರ್ಮೇಂದ್ರ ಪ್ರಧಾನ್ ಇಲ್ಲೇ ಇದ್ದಾರೆ. ಅನಂತಕುಮಾರ್ ಸೇರಿ ಎಲ್ಲ ಸಚಿವರ ಜತೆ ಅಮಿತ್ ಶಾ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜಭವನ, ಕೇಂದ್ರ ಸರ್ಕಾರದ ನಡುವೆ ಸಮನ್ವಯತೆ ಸಾಧಿಸುವುದು ಹಾಗೂ ತಂತ್ರಗಾರಿಕೆ ರೂಪಿಸಲು ಕೇಂದ್ರ ಸಚಿವರು ಇಲ್ಲೇ ಮೊಕ್ಕಾಂ ಹೂಡಿದ್ದಾರೆ ಎಂದು ಹೇಳಲಾಗಿದೆ. 5 ನಿಮಿಷ ಕಾರ್ಯಕ್ರಮ
ಪ್ರಮಾಣ ವಚನ ಸ್ವೀಕಾರ ಸಮಾರಂಭ 9 ಗಂಟೆಗೆ ಆರಂಭಗೊಂಡು ಐದೇ ನಿಮಿಷದಲ್ಲಿ ಮುಗಿದ ಕಾರಣ ತಡವಾಗಿ ಬಂದ ಹಲವಾರು ಶಾಸಕರು ನಿರಾಸೆಗೊಂಡರು. ರಾಜಭವನದ ಮುಂಭಾಗ ಸೇರಿ ಸಂಚಾರ ದಟ್ಟಣೆ ಹೆಚ್ಚಾದ ಕಾರಣ ಶಾಸಕರ ಕಾರುಗಳಿಗೆ ರಾಜಭವನದೊಳಗೆ ಪ್ರವೇಶ ದೊರೆಯುವ ವೇಳೆಗೆ ಸಮಾರಂಭವೇ ಮುಗಿದು ಹೋಗಿತ್ತು. ಹೀಗಾಗಿ, ತಿಪಟೂರು ಶಾಸಕ ನಾಗೇಶ್ ಸೇರಿ ಹಲವರು ತಡವಾಗಿ ಬಂದು ಯಡಿಯೂರಪ್ಪ ಅವರಿಗೆ ಶುಭ ಕೋರಿದರು.