Advertisement

ಅನಿಲಭಾಗ್ಯ ಯೋಜನೆಗೆ ಸಿಎಂ ಚಾಲನೆ

06:10 AM Feb 21, 2018 | |

ಬೆಂಗಳೂರು : ಬಡವರ್ಗದವರಿಗೆ ಉಚಿತ ಅನಿಲ ಸಂಪರ್ಕ, 2 ಸಿಲಿಂಡರ್‌, ಸ್ಟೌವ್‌ ಹಾಗೂ ಲೈಟರ್‌ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನಿಲಭಾಗ್ಯಕ್ಕೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಮೊದಲ ಹಂತದಲ್ಲಿ 10 ಲಕ್ಷ ಕುಟುಂಬ ಸೇರಿದಂತೆ 30 ಲಕ್ಷ ಕುಟುಂಬ ಈ ಯೋಜನೆಯ ಫ‌ಲಾನುಭವ ಪಡೆಯಲಿದೆ ಎಂದು ಘೋಷಿಸಿದರು.

Advertisement

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ವತಿಯಿಂದ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಮನಗರ ತಾಲೂಕಿನ ಗ್ರಹಿಣಿಯರಾದ ಬೋರಮ್ಮ, ನಂದಿನಿ, ಜಯಲಕ್ಷ್ಮೀ ಮತ್ತು ದೀಪು ಅವರಿಗೆ ಗ್ಯಾಸ್‌ಸ್ಟೌವ್‌ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ ಅವರು, ಆದಷ್ಟು ಬೇಗ ಅರ್ಹ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯು ರಾಜ್ಯದ 10 ಸಾವಿರ ಜನರಿಗೂ ಸರಿಯಾಗಿ ತಲುಪಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿಗಳು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಜನರಿಗೂ ಅನಿಲ ಸಂಪರ್ಕ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅನಿಲಭಾಗ್ಯ ಜಾರಿಗೆ ತಂದಿದ್ದೇವೆ. ರಾಜ್ಯದ 30 ಲಕ್ಷ ಕುಟುಂಬಗಳಿಗೆ ಇದರ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ರಾಜ್ಯದಲ್ಲಿ 1.40 ಕೋಟಿ ಬಿಪಿಎಲ್‌ ಕುಟುಂಬ ಇದೆ. ಅನ್ನಭಾಗ್ಯ, ಶಾಧಿಭಾಗ್ಯ, ಮೈತ್ರಿ, ಮನಸ್ವಿನಿ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್‌ ಸೇರಿ ಅನೇಕ ಜನರ ಪರ ಕಾರ್ಯಕ್ರಮ ನೀಡಿದ್ದೇವೆ. 6.50 ಕೋಟಿ ಜನರಲ್ಲಿ ಶೇ.90ರಷ್ಟು ಜನರು ರಾಜ್ಯ ಸರ್ಕಾರದ ಒಂದಲ್ಲ ಒಂದು ಯೋಜನೆಯ ಫ‌ಲಾನುಭವ ಪಡೆಯುತ್ತಿದ್ದಾರೆ ಎಂದರು.

ಗ್ರಾಮೀಣ ಭಾಗದ ಮಹಿಳೆಯರು ಹೊಗೆ ಸೇವಿಸುವುದನ್ನು ತಪ್ಪಿಸಲು, ಸೌದಿಗಾಗಿ ಮರ ಕಡಿಯುವುದನ್ನು ನಿಲ್ಲಿಸಲು ಮತ್ತು ಪರಿಸರ ಸಂರಕ್ಷಣೆಯ ಮೂಲ ಉದ್ದೇಶದೊಂದಿಗೆ  ಅನಿಲಭಾಗ್ಯ ಆರಂಭಿಸಿದ್ದೇವೆ. ಅನಿಲ ಸಂಪರ್ಕದ ಜತೆಗೆ ಗ್ಯಾಸ್‌ಸ್ಟೌವ್‌, ಲೈಟರ್‌ ಮತ್ತು ಎರಡು ಸಿಲಿಂಡರ್‌ ಕೂಡ ನೀಡುತ್ತಿದ್ದೇವೆ. ರಾಜ್ಯದ ಜನತೆ ಅನ್ನಭಾಗ್ಯದ ಅಕ್ಕಿಯನ್ನು ಅನಿಲಭಾಗ್ಯದ ಗ್ಯಾಸ್‌ ಮೂಲಕ ಅಡುಗೆ ಮಾಡಿ, ನೆಮ್ಮದಿಯ ಬದುಕು ನಡೆಸಲಿ ಎಂಬುದೇ ಸರ್ಕಾರದ ಮೂಲ ಧ್ಯೇಯವಾಗಿದೆ ಎಂದು ವಿವರಿಸಿದರು.

Advertisement

ಈ ಯೋಜನೆಯಡಿ ಕುಟುಂಬವೊಂದಕ್ಕೆ ಉಚಿತ ಅನಿಲ ಸಂಪರ್ಕ, ಗ್ಯಾಸ್‌ಸ್ಟೌವ್‌, 2 ಸಿಲಿಂಡರ್‌ ಮತ್ತು ಲೈಟರ್‌ ನೀಡಲು 4254 ರೂ. ಖರ್ಚು ಬರುತ್ತದೆ. ಅದನ್ನು ಪೂರ್ತಿಯಾಗಿ ಸರ್ಕಾರವೇ ಭರಿಸಲಿದೆ. ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ ಅರ್ಹ ಫ‌ಲಾನುಭವಿಗಳ ಆಯ್ಕೆ ನಡೆದಿದೆ. ಈ ಯೋಜನೆಯಲ್ಲಿ ಆಹಾರ ಸಚಿವ ಯು.ಟಿ. ಖಾದರ್‌ ಅವರು ತುಂಬಾ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ ಎಂದು ಶ್ಲಾ ಸಿದರು.

ಆಹಾರ ಸಚಿವ ಯು.ಟಿ.ಖಾದರ್‌, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹಾಗೂ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌, ಮೇಯರ್‌ ಸಂಪತ್‌ ರಾಜ್‌, ಶಾಸಕ ಕೆ.ಎನ್‌.ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಂ.ಕೆ.ಲಕ್ಷ್ಮೀನಾರಾಯಣ, ಆಹಾರ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಕಾರ್ಮಿಕ ಇಲಾಖೆ ಆಯುಕ್ತೆ ವಿ.ಚೈತ್ರಾ, ಅಹಾರ ಇಲಾಖೆ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್‌ ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ಉಜ್ವಲ್‌ ಯೋಜನೆ ಸಮಾಜದ ಶೇ.10ರಷ್ಟು ಜನರಿಗೆ ಮಾತ್ರ ಲಭ್ಯವಾಗುತ್ತಿದ್ದು, ಶೇ.90ರಷ್ಟು ಕುಟುಂಬ ವಂಚಿತರಾಗಿದ್ದಾರೆ. ರಾಜ್ಯದ ಶೋಷಿತರು, ನಿರ್ಗತಿಕರು, ಬಡವರನ್ನೇ ಗುರಿಯಾಗಿಟ್ಟುಕೊಂಡು ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. 30 ಲಕ್ಷ ಕುಟುಂಬ ಇದರ ಫ‌ಲಾನುಭವ ಪಡೆಯಲಿದೆ. ಅನ್ನಭಾಗ್ಯ, ರಿಯಾಯ್ತಿ ದರದಲ್ಲಿ ತೊಗರಿ ಬೇಳೆ, ಆನ್‌ಲೈನ್‌ ಮೂಲಕ ರೇಷನ್‌ ಕಾರ್ಡ್‌ ಸೌಲಭ್ಯ ಸೇರಿದಂತೆ ಆಹಾರ ಇಲಾಖೆ ಹಲವು ಕ್ರಾಂತಿಕಾರಕ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next