Advertisement

ತುಂಬಿದ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ

12:38 PM Sep 22, 2017 | Team Udayavani |

ಎಚ್‌.ಡಿ.ಕೋಟೆ: ತಲೆದೂರಿದ್ದ ಬರದ ಛಾಯೆಯಿಂದಾಗಿ 2ವರ್ಷಗಳ ಬಳಿಕ ತಡವಾಗಿ ಭರ್ತಿಯಾದ ತಾಲೂಕಿನ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಕ್ಯಾಬಿನೆಟ್‌ ಸಚಿವರ ಜೊತೆಗೂಡಿ ಗುರುವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

Advertisement

ಕೇರಳದ ವೈನಾಡು ಪ್ರದೇಶ ಮತ್ತು ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹಿಂಗಾರು ಮಳೆ ಆರ್ಭಟಿಸಿ ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಪರಿಣಾಮ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ಹೆಚ್ಚಿನ ನೀರು ಬಂದಿದ್ದರಿಂದ ಜಲಾಶಯ ಭರ್ತಿಯಾಗಿದೆ. 

 ಬಾಗಿನ ಅರ್ಪಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಜಲಾಶಯದ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಿದ್ದು ಮುಂದಿನ ಬೇಸಿಗೆ ಬೆಳೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.

ಇನ್ನು ಈ ಬಾಗದ ಹಲವು ದಿನಗಳ ಬೇಡಿಕೆಯಾಗಿರುವ ಮುಂಬಾಗದ ಸೇತುವೆ ಮೇಲ್ದರ್ಜೆಗೇರಿಸುವ ಸಂಬಂಧ ಈಗಾಗಲೇ ಎಸ್ಟಿಮೇಟ್‌ ತಯಾರಾಗಿದೆ. ಜಲಾಶಯದ ಮುಂಭಾಗದಲ್ಲಿ ಸುಮಾರು 55 ಕೋಟಿ ರೂ ವೆಚ್ಚದಲ್ಲಿ ಕೆಆರ್‌ಎಸ್‌ ಮಾದರಿ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಂಡಿರುವ ಬೃಂದಾವನ ನಿರ್ಮಾಣ ಸಂಬಂಧ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ಈಗ ಕ್ಯಾಬಿನೆಟ್‌ಗೆ ಬಂದಿದ್ದು ಶೀಘ್ರ ಪ್ರಾರಂಭವಾಗಲಿವೆ ಎಂದರು. 

ಖಾಯಂ ನಿವೇಶನ ನೀಡಲಾಗುವುದು: ಕಬಿನಿ ಜಲಾಶಯ ನಿರ್ಮಾಣದ ಸಂದರ್ಭ ಬಂದು ನೀರಾವರಿ ಇಲಾಖೆ ಸೇರಿದ ಜಾಗದಲ್ಲಿ ನೆಲೆಸಿರುವ ನಿವಾಸಿಗಳಿಗೆ ಕಾಯಂ ನಿವೇಶನ ಇಲ್ಲದೆ, ಪರಿತಪಿಸುತ್ತಿದ್ದೇವೆಂದು ಸ್ಥಳೀಯ ನಿವಾಸಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೊಸ ಜಾಗದ ಬದಲು ಇರುವ ಜಾಗವನ್ನೇ  ನೀಡಲು ಕ್ರಮವಹಿಸಲಾಗುವುದು ಎಂದರು. 

Advertisement

ಮಂಡಳಿ ರಚನೆಗೆ ನಮ್ಮ ವಿರೋಧವಿದೆ: ಕಾವೇರಿ ನದಿ ಹಂಚಿಕೆಯಲ್ಲಿ ನಿರ್ವಹಣ ಮಂಡಳಿ ಆಗಬಾರದು ಎಂಬುದು ನಮ್ಮ ನಿಲುವಾಗಿದೆ, ಸುಪ್ರೀಂ ಕೋರ್ಟ್‌ ಮಂಡಳಿ ರಚನೆಗೆ ಇನ್ನೂ ಆದೇಶ ಮಾಡಿಲ್ಲ. ಮಂಡಳಿ ರಚನೆಗೆ ಪ್ರತಿಕ್ರಿಯೆ ಕೇಳಿದೆ. ಮಂಡಳಿ ರಚನೆ ನಮ್ಮ ತೀವ್ರ ವಿರೋಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.  

ಮಾಜಿ ಶಾಸಕರಿಂದ ಸನ್ಮಾನ, ಸಿಎಂ ಹರ್ಷ: ತಾವು 40 ವರ್ಷಗಳ ಕಾಲ ಪ್ರತಿನಿಧಿಸಿದ್ದ ಕಾಂಗ್ರೆಸ್‌ನ್ನು ಕೆಲವು ಮುಖಂಡರ ನಡೆಗೆ ಬೇಸತ್ತು, ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ತಮ್ಮ ಸ್ವ-ಗ್ರಾಮ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದ ವೇಳೆ ಮನೆಯ ಮುಂಭಾಗದ ರಸ್ತೆಯಲ್ಲೇ ಕಾದು ನಿಂತು ತಮ್ಮ ಅಪಾರ ಬೆಂಬಲಿಗರ ನಡುವೆ ಸಿಎಂ ಸಿದ್ದರಾಮಯ್ಯ, ಸಂಸದ ಆರ್‌, ಧೃವನಾರಾಯಣ್‌,

-ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿಸುವ ಮೂಲಕ ಮತ್ತೆ ತವರು ಪಕ್ಷಕ್ಕೆ ಮರಳುವ ಮುನ್ಸೂಚನೆ ನೀಡಿದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಕೂಡ ಸನ್ಮಾನ ಸ್ವೀಕರಿಸಿ ಸಂತಸಪಟ್ಟರು. ಶಾಸಕ ಎಂ.ಕೆ.ಸೋಮಶೇಖರ್‌, ಕಳಲೆ ಕೇಶವಮೂರ್ತಿ, ವಿಧಾನ ಪರಿಷತ್‌ ಸದಸ್ಯ ಧರ್ಮಸೇನಾ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್‌, ಸದಸ್ಯರಾದ ವೆಂಕಟಸ್ವಾಮಿ, ಎಂ.ಪಿ.ನಾಗರಾಜ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next