ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೂರು ತಿಂಗಳ ಬಳಿಕ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಸಂಪುಟ ವಿಸ್ತರಣೆ ಮಾಡಿದ್ದಾರೆ.
28 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ 12 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದರೆ, 16 ಮಂದಿ ಬಿಜೆಪಿಯ ಶಾಸಕರು ಸಚಿವರಾಗಿದ್ದಾರೆ.
ಮಧ್ಯಪ್ರದೇಶದ ರಾಜ್ಯಪಾಲ ಹುದ್ದೆಯ ಹೆಚ್ಚುವರಿ ಹೊಣೆ ಹೊತ್ತಿರುವ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ರಾಜಭವನದಲ್ಲಿ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. 12 ಮಂದಿಯ ಪೈಕಿ 9 ಮಂದಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ನಿಷ್ಠರಾಗಿದ್ದಾರೆ.
ಇದಲ್ಲದೆ ಎಪ್ರಿಲ್‌ನಲ್ಲಿ ನಡೆದಿದ್ದ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಇಬ್ಬರು ಸಿಂಧಿಯಾ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೀಗಾಗಿ, ಚೌಹಾಣ್ ಸಂಪುಟದಲ್ಲಿ 11 ಮಂದಿ ಗ್ವಾಲಿಯರ್ ರಾಜಮನೆತನದ ಕುಡಿಯ ಬೆಂಬ ಲಿಗರಿಗೆ ಸ್ಥಾನ ಸಿಕ್ಕಂತಾಗಿದೆ. ಹೀಗಾಗಿ, ಮಧ್ಯಪ್ರದೇಶ ಸಂಪುಟದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪ್ರಭಾವಳಿ ಛಾಪು ಎದ್ದು ಕಾಣುತ್ತಿದೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ 22 ಮಂದಿ ಪೈಕಿ 12 ಮಂದಿಗೆ ಸಚಿವ ಸ್ಥಾನ ಲಭಿಸಿದೆ. ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪೈಕಿ 20 ಮಂದಿ ಸಂಪುಟ ದರ್ಜೆ ಸಚಿವರು, ಎಂಟು ಮಂದಿ ಸಹಾಯಕ ಸಚಿವ ಸ್ಥಾನ ಪಡೆದಿದ್ದಾರೆ. ಈ ಪೈಕಿ ಆರು ಮಂದಿ ಕಮಲ್‌ನಾಥ್ ಸರಕಾರ ದಲ್ಲಿ ಸಚಿವರಾಗಿದ್ದರು. ಬಿಜೆಪಿಯಲ್ಲಿ ಹಿರಿಯ ನಾಯಕರು ಸೇರಿದಂತೆ ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಸಂಪುಟ ವಿಸ್ತರಣೆ ಬಳಿಕ ಚೌಹಾಣ್ ಸರಕಾರದಲ್ಲಿ 34 ಮಂದಿ ಸಚಿವರು ಸ್ಥಾನ ಪಡೆದಂತಾಗಿದೆ.
ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ: 12 ಮಂದಿ ನೂತನ ಸಚಿವರು ಆರು ತಿಂಗಳ ಒಳಗಾಗಿ ಚುನಾವಣೆಯಲ್ಲಿ ಗೆಲ್ಲ ಬೇಕಾಗಿದೆ. ಈ ಪೈಕಿ ಆರು ಸಚಿವರು ಗ್ವಾಲಿಯರ್- ಚಂಬಲ್ ಪ್ರದೇಶದವರೇ ಆಗಿದ್ದಾರೆ. ಕುತೂಹಲಕಾರಿ ಅಂಶ ವೆಂದರೆ ಕಮಲ್‌ನಾಥ್ ನೇತೃತ್ವದ ಸರಕಾರಕ್ಕೆ ಬೆಂಬಲ ವಾಪಸ್ ಪಡೆದಿದ್ದ 22 ಮಂದಿ ಶಾಸಕರ ಪೈಕಿ 16 ಸ್ಥಾನಗಳು ಈ ಪ್ರದೇಶದ್ದೇ ಆಗಿವೆ.
ಪ್ರಮುಖರು ಯಾರು?: ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಸಂಬಂಧಿ ಯಶೋಧರಾ ರಾಜೇ ಸಿಂಧಿಯಾಗೆ ಸಂಪುಟ ದರ್ಜೆ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಶಾಸಕ ಗೋಪಾಲ ಭಾರ್ಗವ ಗುರುವಾರ ಪ್ರಮಾಣ ಸ್ವೀಕರಿಸಿದವರಲ್ಲಿ ಪ್ರಮುಖರು.