Advertisement

ಕಬಿನಿ, ಕೆಆರ್‌ಎಸ್‌ಗೆ ಸಿಎಂ ಬಾಗಿನ

06:00 AM Jul 21, 2018 | |

ಮೈಸೂರು/ಶ್ರೀರಂಗ ಪಟ್ಟಣ: ಉತ್ತಮ ಮಳೆ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಭರ್ತಿ ಯಾದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾ ರ ಸ್ವಾಮಿ ಶುಕ್ರವಾರ ಬಾಗಿನ ಅರ್ಪಿಸಿ ದರು. ಇದೇ ವೇಳೆ, ಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪತ್ನಿ ಸಮೇತ ಆಗಮಿಸಿದ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಗುರುವಾರ ಕೊಡಗಿಗೆ ತೆರಳಿದ್ದ  ಕುಮಾರಸ್ವಾಮಿ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಬದಲು ರಸ್ತೆ ಮಾರ್ಗವಾಗಿ
ಮೈಸೂರಿಗೆ ಆಗಮಿಸಿದರು.ಬಳಿಕ,ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಕೃಷ್ಣರಾಜಸಾಗರ
ಜಲಾಶಯಕ್ಕೆ ಆಗಮಿಸಿದರು. 

ಮುಖ್ಯಮಂತ್ರಿಗೆ ಹಸಿರು ಹಾಗೂ ಕೆಂಪು ನೆಲ ಹಾಸು ಹಾಸಿ, ಅದ್ದೂರಿ ಸ್ವಾಗತ ಕೋರಲಾಯಿತು.ಮಂಗಳವಾದ್ಯ, ಮಹಿಳೆ ಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಬಾಗಿನ ಅರ್ಪಿಸುವ ಸ್ಥಳಕ್ಕೆ ಅವರನ್ನು ಕರೆ ತರಲಾಯಿತು.

ಜಲಾಶಯದ ಪ್ರವೇಶದ್ವಾರಕ್ಕೆ ಕಾರಿನಲ್ಲಿ ಆಗಮಿಸಿದ ಅವರು,ಕಾರಿನಿಂದ ಇಳಿದು ಕಾಲ್ನಡಿಗೆಯಲ್ಲೇ ಜಲಾಶಯ ವೀಕ್ಷಣೆ ಮಾಡಿ 
ದರು. ಬಳಿಕ, ಪತ್ನಿ ಅನಿತಾ ಅವರೊಂದಿಗೆ ಸಂಜೆ 4.31ಕ್ಕೆ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಿದರು.

ಡಾ.ಭಾನುಪ್ರಕಾಶ್‌ ಶರ್ಮಾ ಅವರು ಪೂಜಾ ಕೈಂಕರ್ಯ ನೆರ ವೇರಿಸಿದರು. ಬಳಿಕ, ಜಲಾಶಯದ ಕೆಳಭಾಗದಲ್ಲಿರುವ ಕಾವೇರಿ ಪ್ರತಿಮೆ ಬಳಿಗೆ ಆಗಮಿಸಿ, ಕಾವೇರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌,ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟ ರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶಾಸಕರು, ಮೈಸೂರು ಮೇಯರ್‌ ಡಿ.ಭಾಗ್ಯವತಿ ಹಾಗೂ ಇತರರು ಮುಖ್ಯ ಮಂತ್ರಿಗೆ ಸಾಥ್‌ ನೀಡಿದರು.

Advertisement

ರೈತರ ಪ್ರತಿಭಟನೆ
ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಸ್ವರಾಜ್‌
ಇಂಡಿಯಾ ಪಕ್ಷದ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು. ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೃಷ್ಣ ರಾಜಸಾಗರದ ಮುಖ್ಯದ್ವಾರದ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು ಅಣೆಕಟ್ಟೆಗೆ ಬಾಗಿನ ಅರ್ಪಿಸಲು
ಆಗಮಿಸಿದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ಮಧ್ಯೆ, ಮೈಸೂರಿನ  ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಡ್ತಿಮೀಸಲಾತಿ(ಎಸ್ಸಿ-ಎಸ್ಟಿ) ಸಂರಕ್ಷಣಾ ಸಮಿತಿ ಸದಸ್ಯರು ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದರು.

ಸಂಪೂರ್ಣ ಸಾಲ ಮನ್ನಾಗೆ ಕಾಲಾವಕಾಶ ಕೊಡಿ ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, “ಉತ್ತಮ ಮಳೆಯಾಗಿದ್ದು,ನಾಡಿನ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗುವ ಪ್ರಮೇಯವಿಲ್ಲ. ಮುಂದಿನ ಸೆಪ್ಟೆಂಬರ್‌ವರೆಗೂ ತಮಿಳುನಾಡಿಗೆ ಬಿಡಬೇಕಿರುವಷ್ಟು ನೀರನ್ನು ಈಗಾಗಲೇ ಬಿಡಲಾಗಿದೆ’ ಎಂದರು.

ಸಾಲಮನ್ನಾ ಬಗ್ಗೆ ಪ್ರತಿಕ್ರಿಯಿಸಿ, 2018ರ ಜು .10ರವರೆಗೆ ಸಹಕಾರ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್‌ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ರೈತರಿಗೆ ಅನುಕೂಲವಾಗುವಂತಹ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. 

ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ನನಗೆ ಕಾಲಾವಕಾಶ ಕೊಡಿ. ಆತ್ಮಹತ್ಯೆ ಮಾಡಿಕೊಂಡು ನನಗೆ ನೋವು
ಕೊಡಬೇಡಿ ಎಂದು ಭಾವುಕರಾಗಿ ನುಡಿದರು.

ಕೊಡಗಿನ ತಲಕಾವೇರಿಗೆ ಹೋದರೆ ಅಧಿಕಾರ ಹೋಗುತ್ತೆ ಎನ್ನುವ ನಂಬಿಕೆ ಇದೆ. ಹಿಂದೊಮ್ಮೆ ಜೆ.ಎಚ್‌.ಪಟೇಲರು ತಲಕಾವೇರಿಗೆ ಬಂದಿದ್ದಾಗ ಅವರ ಅಧಿಕಾರ ಹೋಗಿದ್ದ ಸಂಗತಿ ಇದೆ. ಆದರೆ,ಇದಕ್ಕೆಲ್ಲಾ ಹೆದರುವುದಿಲ್ಲ. ಕೊಡಗಿನ ಅಧಿದೇವತೆ ಹಾಗೂ ಮೈಸೂರಿನ ಅಧಿದೇವತೆಯ ಆಶೀರ್ವಾದ ನನಗಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಯೊಬ್ಬರು ಸುಮಾರು 19 ವರ್ಷಗಳ ಬಳಿಕ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚಾಮುಂಡಿಗೆ ಸಿಎಂ, ದರ್ಶನ್‌ ವಿಶೇಷ ಪೂಜೆ
ಈ ಮಧ್ಯೆ, ಮೊದಲ ಆಷಾಢ ಶುಕ್ರವಾರ ನಿಮಿತ್ತ ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂತು. ಸಿಎಂ ಕುಮಾರಸ್ವಾಮಿಯವರು ಪತ್ನಿ ಅನಿತಾ ಜೊತೆ ಆಗಮಿಸಿ, ವಿಶೇಷ ಪೂಜೆ ನೆರವೇರಿಸಿದರು. ಸಚಿವರಾದ ಡಿ.ಕೆ.ಶಿವಕುಮಾರ್‌, ಸಾ.ರಾ.ಮಹೇಶ್‌,ಎನ್‌.ಮಹೇಶ್‌, ಶಾಸಕ ಎಸ್‌.ಎ.ರಾಮದಾಸ್‌ ಸೇರಿದಂತೆ ಅನೇಕ ಜನಪ್ರತಿನಿಧಿಗಳು ನಾಡದೇವಿಯ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು. ನಟ ದರ್ಶನ್‌ ತೂಗುದೀಪ್‌ಕೂಡ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು.

ಮೊದಲ ಶುಕ್ರವಾರದಂದು ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಗುಲಾಬಿ, ಸೇವಂತಿ, ಕಾಕಡ, ಮಲ್ಲಿಗೆ, ಕನಕಾಂಬರ, ಕೆಂಪು ಕಣಗಲೆ,ಕೆಂಡಸಂಪಿಗೆ ಸೇರಿದಂತೆ ಬಗೆಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಿಗೆ ಬೆಳಗಿನ ಜಾವ 3.30ರಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾದವು. ಬೆಟ್ಟದ ನಂದಿ ವಿಗ್ರಹ ಮತ್ತು ಮಹಿಷಾಸುರನಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.ಭಕ್ತಾದಿಗಳಿಗೆ ಖಾಸಗಿ ವಾಹನ ನಿರ್ಬಂಧಿಸಿ, ಲಲಿತಮಹಲ್‌ ಹೆಲಿಪ್ಯಾಡ್‌ ನಿಂದ ಉಚಿತ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next