Advertisement

ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಲು ಸಿಎಂ ಸೂಚನೆ

06:55 AM Aug 07, 2018 | Team Udayavani |

ಬೆಂಗಳೂರು: ಬಯಲುಸೀಮೆಯ ಜಿಲ್ಲೆಗಳಿಗೆ ನೀರೊದಗಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿ ಚುರುಕುಗೊಳಿಸುವುದರೊಂದಿಗೆ ಯೋಜನೆಯಿಂದ ಲಭ್ಯವಾಗುವ ನೀರು ಸಂಗ್ರಹಣೆಗೆ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

ಎತ್ತಿನಹೊಳೆ ಯೋಜನೆಯಡಿ ಬರುವ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ  527 ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಈ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಸೂಚಿಸಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕುರಿತಂತೆ ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ  ಎತ್ತಿನಹೊಳೆ ಮತ್ತು ಅದರ ಉಪನದಿಗಳ ನೀರನ್ನು ಪೂರ್ವಾಭಿಮುಖವಾಗಿ ಹರಿಸಿ ಬರ ಪೀಡಿತ ಜಿಲ್ಲೆಗಳಾದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು ಮತ್ತು ಅಂತರ್ಜಲ ಮರುಪೂರಣಕ್ಕಾಗಿ ಎತ್ತಿನಹೂಳೆ ಯೋಜನೆ ರೂಪಿಸಲಾಗಿದೆ. ಇದುವರೆಗೆ ಏನಾಗಿದೆ ಎಂಬ ಬಗ್ಗೆ ನಾನು ಚರ್ಚಿಸುವುದಿಲ್ಲ. ಆದರೆ, ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಕಾಮಗಾರಿ ಚುರುಕುಗೊಳಿಸಬೇಕು ಎಂದು ಸೂಚಿಸಿದರು.

ಎತ್ತಿನಹೊಳೆ ಯೋಜನೆಯಡಿ ನೀರು ಸಂಗ್ರಹಕ್ಕೆ ಬೇಕಾದ ಜಲಾಶಯಗಳ ನಿರ್ಮಾಣಕ್ಕೆ ಅಗತ್ಯ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಚುರುಕುಗೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಜಲ ಸಂಪನ್ಮೂಲ ಇಲಾಖೆ ಹೊಸ ನೀತಿ ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ನೀತಿ ಜಾರಿಗೆ ಬಂದರೆ ಭೂಸ್ವಾಧೀನ ಸಮಸ್ಯೆ ದೂರವಾಗಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತದೆ. ಹಣಕಾಸು ಸಮಸ್ಯೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳಲಿದ್ದು, ಕಾಮಗಾರಿ ತ್ವರಿತಕ್ಕೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಯೋಜನೆ ಪೂರ್ಣಗೊಂಡ ಬಳಿಕ ಲಭ್ಯ ನೀರು ಬಳಸಿಕೊಳ್ಳಲು ಈಗಲೇ ಸಿದ್ಧತೆ ಪೂರ್ಣಗೊಳಿಸಬೇಕಾಗಿದೆ. ಆದ್ದರಿಂದ ಸಣ್ಣ ನೀರಾವರಿ ಇಲಾಖೆಯು ಯೋಜನೆಯಡಿ ನೀರು ಪೂರೈಸಲು ಉದ್ದೇಶಿಸಿರುವ ಕೆರೆಗಳ ಪುನಶ್ಚೇತನವನ್ನು ಹಂತ ಹಂತವಾಗಿ ಯೋಜನೆ ಪ್ರಗತಿಗೆ ಸಮಾನಾಂತರವಾಗಿ ಕೈಗೊಳ್ಳಬೇಕು. ಅದಕ್ಕಾಗಿ ಹೂಳೆತ್ತುವ ಕಾರ್ಯ ಕೈಗೊಂಡು ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು. ಅಲ್ಲದೆ, ಗ್ರಾಮೀಣಾಭಿವೃದ್ಧಿ ಇಲಾಖೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಿ ನೀರಿನ ಬಳಕೆಗೆ ಸಿದ್ಧಗೊಳ್ಳಬೇಕು ಎಂದು ತಿಳಿಸಿದರು.

Advertisement

ಎತ್ತಿನ ಹೊಳೆ ಯೋಜನೆಗೆ ಭೂಸ್ವಾಧೀನವೆ ದೊಡ್ಡ ಸಮಸ್ಯೆಯಾಗಿದೆ. ಈ ಪ್ರಕ್ರಿಯೆ ಚುರುಕುಗೊಳಿಸಲು ಯೋಜನೆಗೆಂದೇ ಮೂರು ಭೂಸ್ವಾಧೀನಾಧಿಕಾರಿ ಹುದ್ದೆಗಳನ್ನು ಮಂಜೂರು ಮಾಡಿದ್ದು, ತುರ್ತಾಗಿ ಅವರನ್ನು ನೇಮಿಸಬೇಕು. ಜತೆಗೆ ಯೋಜನೆಗೆ ಅವಶ್ಯವಿರುವ 21 ಹಳ್ಳಿಗಳ 5000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಹಾಗೂ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕು ಎಂದು ಸೂಚಿಸಿದರು.

ವಿಧಾನಸಭೆ ಅಧ್ಯಕ್ಷ ರಮೇಶ್‌ಕುಮಾರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಎನ್‌.ಎಚ್‌.ಶಿವಶಂಕರರೆಡ್ಡಿ, ಕೃಷ್ಣಬೈರೇಗೌಡ, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಖಾಸಗಿ ಸಹಭಾಗಿತ್ವದಲ್ಲಿ ಕೆರೆಗಳ ಅಭಿವೃದ್ಧಿ 
ಬೆಂಗಳೂರು
: ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿ ಆಸಕ್ತಿ ವಹಿಸಿದ್ದಾರೆ.

ಈ ನಿಟ್ಟಿನಲ್ಲಿ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವ ಕುರಿತು ಸಮಗ್ರ ಯೋಜನೆ ರೂಪಿಸಿ ಪ್ರಸ್ತಾವನೆಸಲ್ಲಿಸುವಂತೆ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಹಣೆ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ನಗರ ಹಾಗೂ ಗ್ರಾಮೀಣ ಪ್ರದೇಶದ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಖುದ್ದು ಆಸಕ್ತಿ ವಹಿಸುವುದಾಗಿ ತಿಳಿಸಿದರು.

ಕೆರೆಗಳನ್ನು ಹೂಳೆತ್ತುವ ಹೆಸರಿನಲ್ಲಿ ಅನುದಾನ ದುರುಪಯೋಗವಾಗಬಾರದು. ಇದರಿಂದ ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಳವಾಗಬೇಕೆಂದು ಹೇಳಿದ ಅವರು, ಸಣ್ಣ ನೀರಾವರಿ ಇಲಾಖೆಯನ್ನು ಬಲಪಡಿಸಿ ಕೆರೆಗಳ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವರು ಗಮನಹರಿಸಬೇಕೆಂದು ಸಲಹೆ ಮಾಡಿದರು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಅರಣ್ಯ ಸಚಿವ ಶಂಕರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next