Advertisement

ಮುಖ್ಯಮಂತ್ರಿ ಜತೆ ವಾಣಿಜ್ಯ ತೆರಿಗೆ ಅಧಿಕಾರಿಗಳ ಸಭೆ ; ಮೊದಲ ತ್ರೈಮಾಸಿಕ: ಗುರಿ ಸಾಧನೆ ಕಷ್ಟ?

01:49 AM May 08, 2020 | Hari Prasad |

ಬೆಂಗಳೂರು: ವಿಶೇಷ ಪ್ಯಾಕೇಜ್‌ ಜತೆಗೆ ವಾಣಿಜ್ಯ ಚಟುವಟಿಕೆಗಳಿಗೆ ಸರಕಾರ ಉತ್ತೇಜನ ನೀಡಿದ್ದರೂ ಪ್ರಸಕ್ತ ಸಾಲಿನ ಮೊದಲ ತ್ತೈಮಾಸಿಕದಲ್ಲಿ ನಿರೀಕ್ಷಿತ ಗುರಿ ಸಾಧನೆ ಅಸಾಧ್ಯ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಸಿಎಂ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.

Advertisement

ಲಾಕ್‌ಡೌನ್‌ ಸಡಿಲವಾದರೂ ವಾಣಿಜ್ಯ ಚಟುವಟಿಕೆಗಳು ಯಥಾಸ್ಥಿತಿಗೆ ಮರಳಬೇಕಾದರೆ ಇನ್ನೂ ಒಂದು ತಿಂಗಳು ಹಿಡಿಯಬಹುದು. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಯಷ್ಟು ತೆರಿಗೆ ಆದಾಯ ಸಂಗ್ರಹವಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಸಿಎಂಗೆ ತಿಳಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದ ತೆರಿಗೆ ಸಂಗ್ರಹ ಸ್ಥಿತಿಗತಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗುರುವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

2020-21ನೇ ಸಾಲಿನಲ್ಲಿ ವಾಣಿಜ್ಯ ತೆರಿಗೆಗಳ ಮೂಲಕ 82,443 ಕೋ.ರೂ. ಸಂಗ್ರಹದ ಗುರಿ ನೀಡಲಾಗಿದೆ. ಆದರೆ ಪ್ರಸಕ್ತ ಆರ್ಥಿಕ ವರ್ಷದ ಪ್ರಾರಂಭದಲ್ಲೇ ಎಪ್ರಿಲ್‌ ತಿಂಗಳು ಪೂರ್ತಿ ಲಾಕ್‌ಡೌನ್‌ ಇದ್ದ ಕಾರಣ ಪೆಟ್ರೋಲ್‌, ಡೀಸೆಲ್‌ ಮಾರಾಟ ಹೊರತುಪಡಿಸಿ ಇತರ ವಹಿವಾಟು ಸ್ಥಗಿತಗೊಂಡಿತ್ತು. ಪೆಟ್ರೋಲ್‌, ಡೀಸೆಲ್‌ ಮಾರಾಟಕ್ಕೆ ಅವಕಾಶವಿದ್ದರೂ ಹೆಚ್ಚು ಮಾರಾಟವಾಗಿಲ್ಲ ಎಂದೂ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮುಂದಿನ ದಿನಗಳ ಬಗ್ಗೆ ಯೋಚಿಸೋಣ. ಸಾಧ್ಯವಾದಷ್ಟು ತೆರಿಗೆ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ. ಸರಕಾರವು ವಾಣಿಜ್ಯ ಮತ್ತು ಉದ್ಯಮ ವಲಯದ ಚೇತರಿಕೆಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ, ಯಾವುದಾದರೂ ನಿಯಮ ಸಡಿಲ, ಅನುಮತಿಯಲ್ಲಿ ಸರಳೀಕರಣ- ಹೀಗೆ ಉತ್ತೇಜನಕಾರಿ ಕ್ರಮಗಳ ಬಗ್ಗೆ ಸರಕಾರ ಮುಕ್ತ ಮನಸ್ಸಿನಿಂದ ಇದೆ, ನೀವು ಸಹಕರಿಸಿ ಎಂದು ಹೇಳಿದರು ಎನ್ನಲಾಗಿದೆ.

Advertisement

ಆರ್ಥಿಕ ಸಂಕಷ್ಟ ಇದ್ದರೂ ಬಡವರಿಗೆ, ರೈತರಿಗೆ, ಉದ್ಯಮಕ್ಕೆ ನೆರವು ಪ್ಯಾಕೇಜ್‌ ಘೋಷಿಸಿದ್ದೇವೆ. ಅದಕ್ಕಾಗಿ ಸಂಪನ್ಮೂಲ ಬೇಕಾಗಿದೆ. ಆಯಾ ವಲಯಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿ ಸಮಸ್ಯೆ ಆಲಿಸಿ ಮತ್ತಷ್ಟು ಸುಧಾರಣೆ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು ಎನ್ನಲಾಗಿದೆ.

ರೈತರಿಗಾಗಿ ಪ್ಯಾಕೇಜ್‌
ಲಾಕ್‌ಡೌನ್‌ ಅವಧಿಯಲ್ಲಿ ಹಣ್ಣು , ತರಕಾರಿ ಬೆಳೆದು ನಷ್ಟ ಅನುಭವಿಸಿರುವ ರೈತರ ಬಗ್ಗೆ ಅಧ್ಯಯನ ತಂಡ ರಚಿಸಿ ವರದಿ ಪಡೆದು ಪ್ಯಾಕೇಜ್‌ ಘೋಷಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ. ರೈತ ಮುಖಂಡರ ಜತೆ ಸಮಾಲೋಚನೆ ನಡೆಸಿದ ಅವರು, ಹಣ್ಣು ಮತ್ತು ತರಕಾರಿ ಹಾಪ್‌ಕಾಮ್ಸ್‌ ಮೂಲಕ ಖರೀದಿ ಸಹಿತ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ಸಾಲದ ವ್ಯವಸ್ಥೆ ಮಾಡುವಂತೆ ರೈತ ಮುಖಂಡರು ಮನವಿ ಮಾಡಿದ್ದು, ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next