Advertisement

ಸಭೆ ಕುತೂಹಲ: ಸಿಎಂ ಯಡಿಯೂರಪ್ಪ- ಸಂತೋಷ್‌ ಮಾತುಕತೆ

07:00 AM Aug 24, 2020 | Hari Prasad |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಪಕ್ಷದ ಕಚೇರಿಗೆ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಡಾ| ಕೆ. ಸುಧಾಕರ್‌ ಅವರನ್ನು ಕರೆಸಿ  ಚರ್ಚಿಸಿದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರನ್ನೂ ಭೇಟಿಯಾಗಿ ಸಮಾಲೋಚಿಸಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.

Advertisement

ರಾಜ್ಯ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂತೋಷ್‌ ಅವರು ಸಿಎಂ ಜತೆ ಶನಿವಾರ ಚರ್ಚಿಸಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಪಕ್ಷ ಸಂಘಟನೆಗೂ ಒತ್ತು ನೀಡುವ ಬಗ್ಗೆ ಉಭಯ ನಾಯಕರು ವಿಸ್ತೃತವಾಗಿ ಸಮಾಲೋಚಿಸಿದ್ದಾರೆ ಎನ್ನಲಾಗಿದೆ.

ಶನಿವಾರ ‘ಕಾವೇರಿ’ ನಿವಾಸಕ್ಕೆ ಆಗಮಿಸಿದ ಸಂತೋಷ್‌ ಮತ್ತು ರಾಜ್ಯ ಬಿಜೆಪಿ ಸಂಘಟನ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರೊಂದಿಗೆ ಯಡಿಯೂರಪ್ಪ ಉಪಾಹಾರ ಸೇವಿಸಿದರು.

ಬಳಿಕ ಸುಮಾರು 25 ನಿಮಿಷಗಳ ಕಾಲ ಮೂವರೂ ಪ್ರತ್ಯೇಕವಾಗಿ ಚರ್ಚಿಸಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೂ ಮಾತನಾಡಿದ ಬಳಿಕ ಬಿ.ಎಲ್‌. ಸಂತೋಷ್‌ ಮತ್ತು ಅರುಣ್‌ ಕುಮಾರ್‌ ನಿರ್ಗಮಿಸಿದರು.

Advertisement

ಮುಂದಿನ ಆಡಳಿತ ವೈಖರಿ, ಪಕ್ಷ ಮತ್ತು ಸರಕಾರದ ಆದ್ಯತೆಗಳು, ಇತ್ತೀಚೆಗೆ ಪಕ್ಷಕ್ಕೆ ಸೇರಿದವರಿಗೆ ಸರಕಾರದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂಬ ಭಾವನೆ ಮೂಡದಂತೆ ಮುಂದುವರಿಯುವುದು. ಕೋವಿಡ್ 19, ಪ್ರವಾಹ ನಿಯಂತ್ರಣಕ್ಕೆ ಬರುತ್ತಿದ್ದಂತೆ ಜನಪರ ಯೋಜನೆಗಳ ಜಾರಿಗೆ ಒತ್ತು ನೀಡುವುದು, ಪಕ್ಷ ಸಂಘಟನೆಗಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದು, ಎಂಬಿತ್ಯಾದಿಗಳ ಬಗ್ಗೆ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಸಮನ್ವಯದ ಕಾರ್ಯ ನಿರ್ವಹಣೆ
ಪಕ್ಷದ ಆಶಯಕ್ಕೆ ಪೂರಕವಾಗಿ ಸರಕಾರ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಮೂಲಕ ಜನಸೇವೆ ಸಲ್ಲಿಸಬೇಕು ಎಂಬ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ.

ಸೆಪ್ಟಂಬರ್‌ನಲ್ಲಿ ಸಿಎಂ ದಿಲ್ಲಿ ಪ್ರವಾಸ?
ಕೋವಿಡ್‌-19, ನೆರೆ ಪರಿಸ್ಥಿತಿ ಸುಧಾರಿಸಿದರೆ ಸೆಪ್ಟಂಬರ್‌ನಲ್ಲಿ ದಿಲ್ಲಿಗೆ ಬರುವಂತೆ ವರಿಷ್ಠರು ಸಿಎಂ ಯಡಿಯೂರಪ್ಪ ಅವರಿಗೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ವಿಧಾನಮಂಡಲ ಅಧಿವೇಶನಕ್ಕೆ ಮೊದಲು ಅಥವಾ ಅನಂತರ ಸಿಎಂ ದಿಲ್ಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next