Advertisement

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾರಥ್ಯದ ನೂತನ ಸಚಿವರ ಕಿರು ಪರಿಚಯ

10:00 AM Aug 21, 2019 | Nagendra Trasi |

ಬೆಂಗಳೂರು: ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 26ದಿನಗಳ ಬಳಿಕ 17 ಮಂದಿ ನೂತನ ಸಚಿವರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ಕಿರು ಪರಿಚಯ ಇಲ್ಲಿದೆ.

Advertisement

ಕೆಎಸ್ ಈಶ್ವರಪ್ಪ: ಶಿವಮೊಗ್ಗ ನಗರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1992ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕುರುಬ ಸಮುದಾಯಕ್ಕೆ ಸೇರಿದ್ದ ಈಶ್ವರಪ್ಪ ಅವರನ್ನು 2012ರಲ್ಲಿ ಉಪಮುಖ್ಯಮಂತ್ರಿಯಾಗಿ ಹಾಗೂ ಕಂದಾಯ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಆರ್.ಅಶೋಕ್: ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಆರ್.ಅಶೋಕ್ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. 2012ರಲ್ಲಿ ಉಪಮುಖ್ಯಮಂತ್ರಿಯಾಗಿಯೂ ಅಶೋಕ್ ಕಾರ್ಯನಿರ್ವಹಿಸಿದ್ದರು.

ವಿ.ಸೋಮಣ್ಣ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿ.ಸೋಮಣ್ಣ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಜನತಾದಳ, ಕಾಂಗ್ರೆಸ್ ಪಕ್ಷದಲ್ಲಿದ್ದ ಸೋಮಣ್ಣ 2009ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಜಗದೀಶ್‌ ಶೆಟ್ಟರ್:‌ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್‌ ಕ್ಷೇತ್ರದ ಶಾಸಕರಾಗಿರುವ ಜಗದೀಶ್‌ ಶೆಟ್ಟರ್‌ ಅವರು 2012-2013ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶೆಟ್ಟರ್‌, ಎಸ್‌. ಎಂ ಕೃಷ್ಣ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 2006ರ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಕಂದಾಯ ಸಚಿವ, 2008ರಲ್ಲಿ ಸ್ಪೀಕರ್‌ ಆಗಿ, 2009ರಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

Advertisement

ಬಸವರಾಜ ಬೊಮ್ಮಾಯಿ: ಮಾಜಿ ಮುಖ್ಯಮಂತ್ರಿ ಎಸ್.‌ ಆರ್.‌ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವೀಧರ. ಜನತಾದಳದಿಂದ ರಾಜಕೀಯ ಆರಂಭಿಸಿದ ಇವರು 2008ರಲ್ಲಿ ಬಿಜೆಪಿಗೆ ಸೇರಿದರು. ಹಾವೇರಿಯ ಶಿಗ್ಗಾಂವ್‌ ವಿಧಾನಸಭೆಯ ಕ್ಷೇತ್ರದ ಶಾಸಕರಾಗಿರುವ ಬೊಮ್ಮಾಯಿ ಅವರು ಉದ್ಯಮಿಯೂ ಕೂಡಾ.

ಸುರೇಶ್ ಕುಮಾರ್: ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುರೇಶ್ ಕುಮಾರ್ ಅವರು 2008ರಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಕಿರಿಯ ವಯಸ್ಸಿನಲ್ಲಿಯೇ ಆರ್ ಎಸ್ ಎಸ್ ನಲ್ಲಿ ಸಕ್ರಿಯರಾಗಿದ್ದ ಸುರೇಶ್ ಕುಮಾರ್ ವಿಜ್ಞಾನ ಪದವೀಧರರು. ಎರಡು ಬಾರಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದರು. ಬಿಜೆಪಿ ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಅಶ್ವಥ ನಾರಾಯಣ ಸಿ.ಎನ್:‌ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿರುವ ಅಶ್ವಥ ನಾರಾಯಣ ಅವರು ವೃತ್ತಿಯಲ್ಲಿ ವೈದ್ಯರು. 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಇವರು ಬೆಂಗಳೂರಿನ ಪ್ರಮುಖ ನಾಯಕರಲ್ಲಿ ಒಬ್ಬರು. ಪ್ರಮುಖ ಒಕ್ಕಲಿಗ ನಾಯಕರಾಗಿರುವ ಅಶ್ವಥ ನಾರಾಯಣ ಅವರು ಇದೇ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟದ ಶ್ರೀನಿವಾಸ ಪೂಜಾರಿ ಅವರು ನಾಲ್ಕು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಮುಜರಾಯಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ಕೋಟ ಶ್ರೀನಿವಾಸ ಪೂಜಾರಿ ಕಾರ್ಯನಿರ್ವಹಿಸಿದ್ದರು.

ಬಿ.ಶ್ರೀರಾಮುಲು: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ಬಿ.ಶ್ರೀರಾಮುಲು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಯಡಿಯೂರಪ್ಪ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಶ್ರೀರಾಮುಲು ಕಾರ್ಯನಿರ್ವಹಿಸಿದ್ದರು. 2011ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಬಳ್ಳಾರಿ ಗ್ರಾಮಾಂತರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಬಳಿಕ ಬಡವ ಶ್ರಮಿಕ ರೈತ ಕಾಂಗ್ರೆಸ್ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. 2014ರಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆ. ಲೋಕಸಭೆಗೆ ಸ್ಪರ್ಧಿಸಿ ಶ್ರೀರಾಮುಲು ಗೆಲುವು ಸಾಧಿಸಿದ್ದರು. 2018ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಮಾಧುಸ್ವಾಮಿ: ತುಮಕೂರಿನ ಚಿಕ್ಕನಾಯಕಹಳ್ಳಿಯ ಶಾಸಕ ಮಾಧುಸ್ವಾಮಿ.  ರಾಮಕೃಷ್ಣ ಹೆಗಡೆ ಜೊತೆಗೆ ಕಾಣಿಸಿಕೊಂಡಿದ್ದ ಇವರು ನಂತರ ಬಿ ಎಸ್‌. ಯಡಿಯೂರಪ್ಪ ಅವರ ಜೊತೆಗೆ ಕಾಣಸಿಕೊಂಡರು. ಬಿ ಎಸ್‌ ವೈ ಜೊತೆಗೆ ಕೆಜೆಪಿಗೆ ಹೋಗಿ ಬಂದ ಇವರು ಉತ್ತಮ ಸಂಸದೀಯ ಪಟು ಎಂದು ಹೆಸರಾದವರು. ಮೂಲತಃ ಕೃಷಿಕರಾಗಿರುವ ಮಾಧುಸ್ವಾಮಿ ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.

ಸಿ .ಟಿ.ರವಿ: ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ ರವಿ ಅವರು 2004ರಲ್ಲಿ ಮೊದಲ ಬಾರಿಗೆ ವಿಧಾನ ಸಭೆಗೆ ಪ್ರವೇಶಿದ್ದರು. ಪ್ರಖರ ಹಿಂದುತ್ವವಾದಿಯಾದ ಸಿ.ಟಿ ರವಿ ಅವರು ದತ್ತಪೀಠ ಅಭಿಯಾನದ ಮೂಲಕ ಮುನ್ನಲೆಗೆ ಬಂದವರು. ಹಿಂದಿನ ಬಿಜೆಪಿ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

ಗೋವಿಂದ ಕಾರಜೋಳ: ಬಾಗಲಕೋಟೆ ಜಿಲ್ಲೆಯ ಮುಧೊಳ ಕ್ಷೇತ್ರದ ಬಿಜೆಪಿ ಶಾಸಕ. 1994ರಲ್ಲಿ ಮೊದಲ ಬಾರಿಗೆ ಜೆಡಿಎಸ್‌ ನಿಂದ ಆಯ್ಕೆಯಾದ ಕಾರಜೋಳ ನಂತರ 2004, 2008, 2013 ಮತ್ತು 2018ರಲ್ಲಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ

ಲಕ್ಷ್ಮಣ ಸವದಿ; ಅಥಣಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಲಕ್ಷ್ಮಣ ಸಂಗಪ್ಪ ಸವದಿ ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಹಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಸಿ.ಸಿ. ಪಾಟೀಲ್:‌ ಚಂದ್ರಕಾಂತ ಗೌಡ ಚನ್ನಪ್ಪಗೌಡ ಪಾಟೀಲ್‌  2004, 2008 ಮತ್ತು 2018ರಲ್ಲಿ ನರಗುಂದ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದಾನಂದ ಗೌಡರ ನೇತೃತ್ವದ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದ ಸಿ.ಸಿ. ಪಾಟೀಲ್‌, ವಿಧಾನ ಸಭೆಯಲ್ಲಿ ವಿಡಿಯೋ ಕ್ಲಿಪ್‌ ನೋಡಿದ ಆರೋಪದಿಂದಾಗಿ 2012 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.‌

ಹೆಚ್. ನಾಗೇಶ್:‌ ಮುಳಬಾಗಿಲು ಕ್ಷೇತ್ರದ ಶಾಸಕರಾಗಿರುವ ಹೆಚ್.‌ ನಾಗೇಶ್‌ ಅವರು 34 ವರ್ಷ ಸರ್ಕಾರಿ ಅಧಿಕಾರಿಯಾಗಿ ಸೇವೆ ಮಾಡಿದವರು. ಐಆರ್‌ ಎಸ್‌ ಅಧಿಕಾರಿಯಾಗಿದ್ದ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ನಂತರ ರಾಜಕೀಯ ಪ್ರವೇಶ ಮಾಡಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಅವರು ಕುಮಾರಸ್ವಾಮಿ ಅವಧಿಯಲ್ಲೂ ಸಚಿವರಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ನಿಷ್ಠೆ ತೋರಿದ್ದರು.

ಪ್ರಭು ಚೌಹಾಣ್:‌ ಬೀದರ್‌ ಜಿಲ್ಲೆಯ ಔರಾದ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪ್ರಭು ಚೌಹಾಣ್‌ ಅವರು 2008ರಿಂದ ಸತತವಾಗಿ ಮೂರು ಬಾರಿ ಶಾಸಕರಾಗಿದ್ದಾರೆ. ಮೊದಲು ಕಾಂಗ್ರೆಸ್‌ ನಂತರ ಜನತಾ ದಳದ ಭದ್ರಕೋಟೆಯಾಗಿದ್ದ ಔರಾದ್‌ ನಲ್ಲಿ ಮೊದಲ ಬಾರಿಗೆ ಪ್ರಭು ಚೌಹಾಣ್‌ ಬಿಜೆಪಿ ಪತಾಕೆ ಹಾರಿಸಿದ್ದರು.

ಶಶಿಕಲಾ ಜೊಲ್ಲೆ: ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರ ಪತ್ನಿ.  2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿದದ್ದ ಅವರು ವೃತ್ತಿಯಿಂದ ಉದ್ಯಮಿಯಾಗಿದ್ದಾರೆ. ಗಡಿ ಭಾಗದ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಹಕಾರಿ ಬ್ಯಾಂಕ್ ಗಳನ್ನು ಹೊಂದಿದ್ದಾರೆ. ಪತಿ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಒಟ್ಟಾಗಿ ಈ ಉದ್ಯಮಗಳನ್ನು ನೋಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next