Advertisement
ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟ ದಲ್ಲೂ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದು ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಗುರಿ ನಮ್ಮ ಸರಕಾರದ್ದು. ಕಳೆದೆರಡು ವರ್ಷಗಳಲ್ಲಿ ಇಡೀ ವಿಶ್ವವನ್ನೇ ಬಾಧಿಸಿದ ಕೊರೊನಾ ಸಾಂಕ್ರಾಮಿಕ ಜನತೆಯ ಆರೋಗ್ಯ, ಜನಜೀವನ ಮಾತ್ರವಲ್ಲದೆ ವಾಣಿಜ್ಯ-ವ್ಯವಹಾರದ ಮೇಲೂ ಬೀರಿದ ಪರಿಣಾಮ ಅಪಾರ. ಇದು ಆರ್ಥಿಕತೆಗೆ ಕೊಟ್ಟ ಹೊಡೆತವೂ ಎಲ್ಲರಿಗೆ ತಿಳಿದಿರುವ ಸಂಗತಿ. ಆದರೆ ಈ ಎಲ್ಲ ಸವಾಲುಗಳನ್ನು ಸರಕಾರ ಸಮರ್ಥವಾಗಿ ಮೆಟ್ಟಿನಿಲ್ಲುವ ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ಸ್ಪಷ್ಟ. ಈ ಅವಧಿಯಲ್ಲಿ ಸರಕಾರದ ಬೊಕ್ಕಸದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದರೂ ಲಾಕ್‌ಡೌನ್ ಅವಧಿಯ ಹೊರತಾಗಿ ಅಭಿ ವೃದ್ಧಿ ಯೋಜನೆಗಳಾಗಲೀ ಜನಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಾಗಲೀ ಎಲ್ಲೂರಾಜಿಯಾಗಿಲ್ಲ. ರಾಜ್ಯದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಆರು ತಿಂಗಳುಗಳಿಂದ ರಾಜ್ಯದಲ್ಲಿ ಆರ್ಥಿಕ ಚೇತರಿಕೆ ಕಂಡುಬಂದ ಪರಿಣಾಮವಾಗಿ 2021-22ನೇ ಸಾಲಿನ ರಾಜ್ಯದ ಆದಾಯ ಸಂಗ್ರಹದಲ್ಲಿ ಗುರಿಮೀರಿದ ಸಾಧನೆಯಾಗಿದೆ. ಆರ್ಥಿಕ ಶಿಸ್ತನ್ನು ತರಲು ನಾವು ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿರುವ ಪರಿಣಾಮವಾಗಿ ಈ ಬಾರಿ ಬಜೆಟ್ ಗಾತ್ರವನ್ನು 2,65,720 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಾಧ್ಯವಾಯಿತು.
Related Articles
Advertisement
ದೇಶದಲ್ಲಿಯೇ ಮೊದಲ ಬಾರಿಗೆ ಪದವಿಹಂತದಲ್ಲಿ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ಎಲ್ಲ ಹಂತಗಳಲ್ಲೂ ಜಾರಿಗೆ ತರಲಾಗು ವುದು. ರಾಜ್ಯದೆಲ್ಲೆಡೆ ಗುಣಮಟ್ಟದ ಶಿಕ್ಷಣ ಲಭಿಸುವಂತೆ ಮಾಡಲು ದೇಶ ಮಾತ್ರವಲ್ಲದೆ ವಿಶ್ವದ ಪ್ರಮುಖ ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಾಂತ್ರಿಕ ಮತ್ತು ಕೈಗಾರಿಕೆ ತರಬೇತಿ ಶಿಕ್ಷಣ ದಲ್ಲಿಯೂ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ. ಉದ್ಯಮಿಗಳ ನೆರವಿನೊಂದಿಗೆ ಕೌಶಲಾಧಾರಿತ ಮತ್ತು ಪ್ರಾಯೋಗಿಕ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಲಾಗಿದೆ.
ಯಾವುದೇ ಪ್ರದೇಶವಾರು, ಜಾತಿ, ಮತಗಳ ಭೇದವಿಲ್ಲದೆ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗು ತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸನ್ನುನನಸಾಗಿಸುವಲ್ಲಿ ಯಾವುದೇ ರಾಜಿ ಇಲ್ಲ. ಇಂಥದೊಂದು ಮಹಾತ್ಕಾರ್ಯದಲ್ಲಿ ಸರಕಾರ ತನ್ನ ಪಾತ್ರವನ್ನು ನಿರ್ವಹಿಸಲಿದೆ. ಆದರೆ ಜನರು ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಸಹಯೋಗ ನೀಡಿದಾಗ ಮಾತ್ರ ಸಂಪೂರ್ಣ ಯಶಸ್ಸು ಮತ್ತು ಸಮಗ್ರ ಅಭಿವೃದ್ಧಿ ಸಾಧ್ಯ. ಹಾಗಾಗಿ ಸರಕಾರದ ಪರಿಶ್ರಮಕ್ಕೆ ಜನರ ಸಹಯೋಗದ ಪರಿಮಳ ಸೇರಬೇಕು ಎಂಬುದು ನಮ್ಮ ಅಭಿಲಾಷೆ. ಆಗ ಮಾತ್ರ ಕನ್ನಡ ನಾಡಿನ ಕಂಪು ಜಗದಗಲಕ್ಕೂ ವಿಸ್ತರಿಸಲು ಸಾಧ್ಯ. ಅದಾಗಲಿ. ಆ ಮೂಲಕ ಸರ್ವಾಂಗೀಣ ಅಭಿವೃದ್ಧಿಯ ಸಶಕ್ತ ನವ ಕರ್ನಾಟಕ ರೂಪು ಗೊಳ್ಳುತ್ತದೆಂಬುದು ನಮ್ಮ ನಿರೀಕ್ಷೆ.