Advertisement

ಈ ಬಾರಿಯ ಬಜೆಟ್ ನಲ್ಲಿ ಕೃಷಿ ಮತ್ತು ಪಶು ಸಂಗೋಪನೆಗೆ ಆದ್ಯತೆ: ಮುಖ್ಯಮಂತ್ರಿ ಭರವಸೆ

10:07 AM Feb 08, 2020 | Hari Prasad |

ಬೀದರ್: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೃಷಿ ಮತ್ತು ಪಶು ಸಂಗೋಪನೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಮೀರಿ ಪ್ರಯತ್ನಪಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ

Advertisement

ಬೀದರ್ ನ ಹೊರವಲಯದ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಆವರಣದಲ್ಲಿ ಶುಕ್ರವಾರ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಏರ್ಪಡಿಸಿರುವ ಮೂರು ದಿನಗಳ ರಾಜ್ಯ ಪಶು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಜೀವನ ಮಟ್ಟ ಸುಧಾರಿಸುವಲ್ಲಿ ಸರ್ಕಾರ ಕಟಿ ಬದ್ಧವಾಗಿದೆ. ಈ ದಿಸೆಯಲ್ಲಿ ಹಾಲಿಗೆ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.

ದೇಶದ ಜಿಡಿಪಿಗೆ ಕೃಷಿ ಮತ್ತು ಹೈನುಗಾರಿಕೆ ಉತ್ತಮ ಕೊಡುಗೆ ನೀಡುತ್ತಿದೆ. ಹವಾಮಾನ ವೈಪರೀತ್ಯದಿಂದ ತತ್ತರಿಸುವ ರೈತ ಬಾಂಧವರಿಗೆ ಆರ್ಥಿಕ ಶಕ್ತಿ ತುಂಬುವಲ್ಲಿ ಪಶು ಸಂಗೋಪನೆ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದ ಸಿಎಂ ಯಡಿಯೂರಪ್ಪ, ಪಶು ಪಾಲನೆಯಿಂದ ಹೆಚ್ಚು ಲಾಭ ಗಳಿಸುವ ಅವಕಾಶ ಇರುವುದರಿಂದ ರೈತರು ಕೃಷಿ ಜತೆಗೆ ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ರಾಜಸ್ಥಾನ ಬಳಿಕ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆಯಿಂದ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಇದನ್ನು ತಡೆಗಟ್ಟಿ, ಜಾನುವಾರು ಸಂಪತ್ತು ಕಾಪಾಡಲು ಸರ್ಕಾರ ಮೇವು ಭದ್ರತಾ ಕೇಂದ್ರಗಳನ್ನು ಈಗಾಗಲೇ ಆರಂಭಿಸಿದೆ.

ಕೃಷಿ ಮತ್ತು ಪಶು ಸಂಗೋಪನೆಯಲ್ಲಿ ಹೆಚ್ಚಿನ ಆದಾಯ ಪಡೆಯಲು ಅನುಕೂಲವಾಗುವಂತೆ ಪಶು ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಥೆಗಳಲ್ಲಿ ಕೈಗೊಳ್ಳುವ ಅವಿಷ್ಕಾರಗಳನ್ನು ಮೇಳದ ಮೂಲಕ ಪರಿಚಯ ಮತ್ತು ಜಾಗೃತಿ ಮೂಡಿಸಲು ಇಂಥ ಮೇಳಗಳನ್ನು ಆಯೋಜಿಸಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

Advertisement

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಜಲಾಶಯಗಳು ತುಂಬಿ ತುಳುಕುತ್ತಿದ್ದರೆ, ಬೀದರ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು, ಇದಕ್ಕಾಗಿ ಅಗತ್ಯ ಅನುದಾನ ಬಿಡುಗಡೆಗೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ಬಗ್ಗೆ ನನಗೆ ಭಾವನಾತ್ಮಕ ಸಂಬಂಧ ಇದ್ದು, ಈ ಭಾಗದ ಆರ್ಥಿಕವಾಗಿ ಪ್ರಗತಿಯೇ ನನ್ನ ಗುರಿಯಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿದರು.

ಸಂಸದ ಭಗವಂತ ಖೂಬಾ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಶಾಸಕರಾದ ರಹೀಂ ಖಾನ್, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಬಿ.ನಾರಾಯಣರಾವ್, ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ, ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ತಾಪಂ ಅಧ್ಯಕ್ಷ ವಿಜಯಕುಮಾರ ಬರೂರ, ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ, ವಿವಿ ಕುಲಪತಿ ಡಾ.ಹೆಚ್.ಡಿ.ನಾರಾಯಣಸ್ವಾಮಿ, ಇಲಾಖೆಯ ಆಯುಕ್ತ ಎಸ್.ಆರ್.ನಟೇಶ್, ಜಿಲ್ಲಾಧಿಕಾರಿ ಹೆಚ್.ಆರ್.ಮಹಾದೇವ್, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ನಾಗೇಶ ಡಿ.ಎಲ್, ಇಲಾಖೆಯ ನಿರ್ದೇಶಕ ಡಾ.ಎಂ.ಟಿ.ಮಂಜುನಾಥ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next