ಹೊಸದಿಲ್ಲಿ: ವಿಶ್ವಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ತಂಡ ತೀರಾ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಕೋಚ್ ಗ್ರಹಾಂ ರೀಡ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಜತೆಗೆ ತಂಡದ ಅನಾಲಿಟಿಕಲ್ ಕೋಚ್ ಗ್ರೆಗ್ ಕ್ಲಾರ್ಕ್ ಮತ್ತು ವೈಜ್ಞಾನಿಕ ಸಲಹೆಗಾರ ಮಿಚೆಲ್ ಡೇವಿಡ್ ಕೂಡ ಹುದ್ದೆ ಬಿಟ್ಟು ಕೆಳಗಿಳಿದಿದ್ದಾರೆ.
ಆಸ್ಟ್ರೇಲಿಯದ 58 ವರ್ಷದ ಗ್ರಹಾಂ ರೀಡ್ ತಮ್ಮ ರಾಜೀನಾಮೆ ಪತ್ರವನ್ನು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ನೀಡಿದರು. ಇವರೆಲ್ಲರ ರಾಜೀನಾಮೆಯನ್ನೂ ಟಿರ್ಕಿ ಸ್ವೀಕರಿಸಿದ್ದಾರೆ.
“ಭಾರತ ಯಾವತ್ತೂ ಗ್ರಹಾಂ ರೀಡ್ ಮತ್ತು ಅವರ ಬಳಗಕ್ಕೆ ಕೃತಜ್ಞ ವಾಗಿರುತ್ತದೆ. ಇವರೆಲ್ಲ ಉತ್ತಮ ಫಲಿ ತಾಂಶ ತಂದುಕೊಡುವಲ್ಲಿ ಶ್ರಮಿಸಿ ದ್ದಾರೆ. ಒಲಿಂಪಿಕ್ಸ್ ಹಾಕಿ ಪದಕದ ಬರಗಾಲ ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಮರೆಯು ವಂತಿಲ್ಲ’ ಎಂದು ಟಿರ್ಕಿ ಪ್ರತಿಕ್ರಿಯಿಸಿದ್ದಾರೆ.
Related Articles
2019ರಲ್ಲಿ ಭಾರತೀಯ ತಂಡದ ಹಾಕಿ ಕೋಚ್ ಆಗಿ ನೇಮಕಗೊಂಡ ಗ್ರಹಾಂ ರೀಡ್ ಅವರ ಕಾರ್ಯಾವಧಿ 2024ರ ಪ್ಯಾರಿಸ್ ಒಲಿಂಪಿಕ್ಸ್ ತನಕ ಇತ್ತು.
ಒಲಿಂಪಿಕ್ಸ್ ಸಾಧನೆ
40 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಗೆದ್ದದ್ದು, ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದು, 2021-22ರ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನಿಯಾದದ್ದು, 2019ರಲ್ಲಿ ಎಫ್ಐಎಚ್ ಸೀರಿಸ್ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸಿದ್ದೆಲ್ಲ ರೀಡ್ ತರಬೇತಿಯ ಅವಧಿಯಲ್ಲಿ ಭಾರತ ನೆಟ್ಟ ಮೈಲುಗಲ್ಲುಗಳು.
“ಭಾರತೀಯ ಹಾಕಿಯೊಂದಿಗೆ ಕರ್ತವ್ಯ ನಿಭಾಯಿಸಿದ್ದು ನನ್ನ ಪಾಲಿನ ಸ್ಮರಣೀಯ ಪಯಣ. ಈ ಪಯಣ ಇಲ್ಲಿಗೆ ಕೊನೆಗೊಳ್ಳುತ್ತದೆ. ತಂಡಕ್ಕೆ ಆಲ್ ದಿ ವೆರಿ ಬೆಸ್ಟ್…’ ಎಂದು ಗ್ರಹಾಂ ರೀಡ್ ವಿದಾಯ ಸಂದರ್ಭದಲ್ಲಿ ಹೇಳಿದರು.