Advertisement
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದ ಮೂರ್ತಿಯವರು ಇಂಟರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹತ್ತನೆಯ ರ್‍ಯಾಂಕ್ ಪಡೆದರೂ ಕನ್ನಡ ಆನರ್ಸ್ ಪದವಿಗೆ ಸೇರಿ ಕನ್ನಡಕ್ಕಾಗಿ ಜೀವ ಸವೆಸಿದವರು. ಬೆಂಗಳೂರು ವಿ.ವಿ.ಯಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಸಂಶೋಧನೆಗಾಗಿ ಹಲವು ದೇಶ, ಭಾರತದ ಬೇರೆ ಬೇರೆ ಪ್ರಾಂತಗಳನ್ನು ಸಂದರ್ಶಿಸಿದವರು. 25ಕ್ಕೂ ಹೆಚ್ಚು ಕೃತಿ, 400ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ ನಾಡಿನ ದೊಡ್ಡ ಹೆಸರು ಚಿಮೂ. ಕನ್ನಡ ಶಕ್ತಿ ಕೇಂದ್ರದ ಮೂಲಕ ಚಳವಳಿಯನ್ನೇ ಹುಟ್ಟುಹಾಕಿದವರು. ಹಂಪಿಯಲ್ಲಿ ಕನ್ನಡ ವಿ.ವಿ. ಸ್ಥಾಪನೆಗೆ ಕಾರಣರಾದವರಲ್ಲಿ ಪ್ರಮುಖರು. ಇವರಿಗೆ ರಾಜ್ಯೋತ್ಸವ, ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಮೊದಲಾದ ಪ್ರಶಸ್ತಿ ಸಿಕ್ಕಿದೆ. ಇಷ್ಟೆಲ್ಲ ಬಲ ಒಬ್ಬ ಮನುಷ್ಯನಿಗೆ ಹೇಗೆ ಬರುತ್ತದೆ ಎಂಬ ತರ್ಕ ಹೊಳೆದರೆ ಅವರ ಮೂಲಭೂತ ಪ್ರಮುಖ ಗುಣಗಳನ್ನು (ಸ್ವ-ಭಾವ) ಅವಲೋಕಿಸಿ ಸತ್ಯಾನ್ವೇಷಕರಾಗಬಹುದು.
Related Articles
Advertisement
ಈಗ ವಿನಯಕುಮಾರ್ ತನ್ನ ತಂದೆಯವರ ಸ್ವಾಭಿಮಾನತನವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ. “ಆಗಿನದು ಪ್ರೀಮೆಚ್ಯುರ್ ಮೈಂಡ್. ಈಗ ತಂದೆಯ ಮೌಲ್ಯ ಅರ್ಥವಾಗುತ್ತಿದೆ’ ಎನ್ನುತ್ತಾರೆ ವಿನಯಕುಮಾರ್. ವಿನಯಕುಮಾರ್ ಬಳಿಕ ಕಸ್ಟಮ್ಸ್ ಇಲಾಖೆಗೆ ಸೇರಿದರು. ಸ್ವಂತ ಆಸಕ್ತಿಯಿಂದ 2003-04ರಿಂದ 16ರ ವರೆಗೆ ವನ್ಯಜೀವಿ ಇಲಾಖೆಯಲ್ಲಿ ಹುಲಿ ಸಂಶೋಧನೆ ಕೆಲಸದಲ್ಲಿ ಎರವಲು ಸೇವೆಯಲ್ಲಿ ತೊಡಗಿಕೊಂಡರು. 2017ರಲ್ಲಿ ನಿವೃತ್ತಿಗೆ ಎಂಟು ವರ್ಷ ಇರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡು ಮತ್ತೆ ಡಾ|ಉಲ್ಲಾಸ್ ಕಾರಂತ(ಕೋಟ ಶಿವರಾಮ ಕಾರಂತರ ಮಗ)ರ ಜತೆ ವನ್ಯಜೀವಿ ವಿಭಾಗದಲ್ಲಿ ಕೆಲಸ ನಿರ್ವಹಿಸಿದರು. ಈಗ ವಿನಯಕುಮಾರರಿಗೆ 55 ವರ್ಷ. ಇನ್ನು ವನ್ಯಜೀವಿ, ಹುಲಿ ಸಂಶೋಧನೆ ಬೇಡವೆಂದು ಅವರಿಗೆ ಅನಿಸಿದೆ. ತಂದೆಯವರ ಸಾಮಾಜಿಕ ಕಳಕಳಿ, ಚಳವಳಿಯನ್ನು ಹತ್ತಿರದಿಂದ ಕಂಡ ಮಗನಿಗೆ ತನ್ನ ಇದುವರೆಗಿನ ಸಾಧನೆ ಆಲ್ಪವೆಂದು ಕಾಣುತ್ತಿದೆ. ತಂದೆ ದಾರಿಯಲ್ಲಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಬಲವಾದ ಇಚ್ಛೆ ಮಗನಲ್ಲಿ ಮೂಡಿದೆ. ಯಾವ ರೀತಿ, ಯಾವ ದಿಕ್ಕಿನಲ್ಲಿ ಎಂಬ ಸ್ಪಷ್ಟ ನಿರ್ಧಾರಕ್ಕೆ ಇನ್ನಷ್ಟೇ ಬರಬೇಕಾಗಿದೆ.
ಮಗನಿಗೆ ಸಾಕಷ್ಟು ಆದಾಯ ಬರುವ ಮೂಲವಿದ್ದರೂ ಅದನ್ನೊಲ್ಲೆ ಎನ್ನುತ್ತ ಸಾಮಾಜಿಕ ಜೀವನ ಸಂತೃಪ್ತಿಯತ್ತ ಮುಖ ಮಾಡುತ್ತಿರುವುದಕ್ಕೆ ಚಿಮೂ ಅವರು ಎಂದೋ ಹಾಕಿಕೊಟ್ಟ “ಜೀವನಬೀಜ’ದ ಪಾಠ ಕಾರಣ ಎಂದು ವಿಶ್ಲೇಷಿಸಬಹುದು. ಅದೇ ರೀತಿ ಈಗ ಮಾಧ್ಯಮಗಳಲ್ಲಿ ನಿತ್ಯ ರಾರಾಜಿಸುವ ಸ್ವಜನಪಕ್ಷಪಾತ, ಹಗರಣ, ಭ್ರಷ್ಟಾಚಾರಗಳನ್ನು ಕಂಡಾಗ ಆರೋಪಿ ಸ್ಥಾನದಲ್ಲಿರುವವರ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನೈತಿಕ ದಾರಿಯಲ್ಲಿ ಬೆಳೆಸುವಲ್ಲಿ ಎಡವಿದರೋ ಎಂದು ಸಂಶಯ ಬರುತ್ತದೆ. ಚಿಮೂ ಅವರಂತಹ ತಂದೆ-ತಾಯಂದಿರ ಸಂಖ್ಯೆ ಹೆಚ್ಚಿಸುವ ದೀರ್ಘಾವಧಿ ಗುರಿಯತ್ತ ಸಮಾಜ ಕಾರ್ಯಾಚರಿಸಬೇಕಾಗಿದೆ.
-ಮಟಪಾಡಿ ಕುಮಾರಸ್ವಾಮಿ