Advertisement

ರಾಜ್ಯಸಭೆ: ಚಿದಂಬರಂ,ಶುಕ್ಲಾ ಅವಿರೋಧ ಆಯ್ಕೆ; ಸ್ಥಳೀಯ ಪಕ್ಷಗಳಿಗೆ ಆಯಾ ರಾಜ್ಯಗಳಲ್ಲಿ ಸುಲಭ ಜಯ

12:28 AM Jun 04, 2022 | Team Udayavani |

ಹೊಸದಿಲ್ಲಿ: ಎಲ್ಲ ರಾಜ್ಯಗಳಲ್ಲೂ ರಾಜ್ಯಸಭಾ ಚುನಾವಣೆಯ ಕಸರತ್ತು ತಾರಕಕ್ಕೇರಿದೆ. ಜೂ. 10ರಂದು ನಡೆಯುವ ಚುನಾವಣೆಗಾಗಿ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು ಅವುಗಳನ್ನು ವಾಪಸ್‌ ಪಡೆಯಲು ಜೂ. 3 ಕಡೆಯ ದಿನವಾಗಿತ್ತು. ಆ ಹಿನ್ನೆಲೆಯಲ್ಲಿ ತಮಿಳುನಾಡು, ಪಂಜಾಬ್‌, ಮಧ್ಯಪ್ರದೇಶ ಸೇರಿ ಕೆಲವು ರಾಜ್ಯಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಅವರಲ್ಲಿ ಕೇಂದ್ರದ ಮಾಜಿ ಸಚಿವರಾದ ಪಿ. ಚಿದಂಬರಂ, ರಾಜೀವ್‌ ಶುಕ್ಲಾ ಪ್ರಮುಖರು.ಪಿ. ಚಿದಂಬರಂ ಸೇರಿದಂತೆ ತಮಿಳುನಾಡಿನಿಂದ ಸ್ಪರ್ಧಿಸಿದ್ದ ಎಲ್ಲ ಆರು ಕಾಂಗ್ರೆಸ್‌ ಅಭ್ಯರ್ಥಿಗಳು ಹಾಗೂ ಡಿಎಂಕೆಯ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿದಂಬರಂ ಆಯ್ಕೆಯ ಮೂಲಕ ಕಾಂಗ್ರೆಸ್‌ಗೆ ತಮಿಳುನಾಡಿ ನಿಂದ ದೀರ್ಘಾವಧಿಯ ಅನಂತರ ತನ್ನ ಪ್ರಾತಿನಿಧ್ಯ ಸಿಕ್ಕಂತಾಗಿದೆ. 2016ರಲ್ಲಿ ಚಿದಂಬರಂ ಅವರು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರ ಸೇವಾವಧಿ ಇದೇ ಜೂ. 4ರಂದು ಕೊನೆಗೊಳ್ಳಲಿದೆ. ಇವರಲ್ಲದೆ, ಡಿಎಂಕೆಯ ಎಸ್‌. ಕಲ್ಯಾಣ ಸುಂದರಂ, ಆರ್‌. ಗಿರಿರಾಜನ್‌, ಕೆಆರ್‌ಎನ್‌ ರಾಜೇಶ್‌ ಕುಮಾರ್‌, ಎಐಎಂಡಿಎಂಕೆಯ ಸಿ.ವೆ. ಷಣ್ಮುಗಂ ಹಾಗೂ ಆರ್‌ ಧರ್ಮಾರ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನು, ಉತ್ತರಾಖಂಡದಲ್ಲಿ ಬಿಜೆಪಿಯ ಕಲ್ಪನಾ ಸೈನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ನ ವಿಜಯಸಾಯಿ ರೆಡ್ಡಿ, ಬೀಡಾ ಮಸ್ತಾನ್‌ ರಾವ್‌, ಆರ್‌. ಕೃಷ್ಣಯ್ಯ ಹಾಗೂ ಎಸ್‌. ನಿರಂಜನ್‌ ರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಝಾರ್ಖಂಡ್‌ನ‌ಲ್ಲಿ, ಜೆಎಂಎಂ ಪಕ್ಷದ ಮಹುವಾ ಮೊಜಿ, ಬಿಜೆಪಿಯ ಆದಿತ್ಯ ಸಾಹು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ನಾಯಕರಾದ ರಾಜೀವ್‌ ಶುಕ್ಲಾ, ರಂಜಿತ್‌ ರಂಜನ್‌, ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್‌ ಆದ್ಮಿ ಪಾರ್ಟಿಯ (ಆಪ್‌), ಬಲ್ಬಿರ್‌ ಸಿಂಗ್‌ ಸೀಚೆವಾಲ್‌, ವಿಕ್ರಮ್‌ಜಿತ್‌ ಸಿಂಗ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಏನತ್ಮಧ್ಯೆ, ಬಿಹಾರದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದ ಮಿಸಾ ಭಾರತಿ, ಫೈಯದ್‌ ಅಹ್ಮದ್‌ (ಆರ್‌ಜೆಡಿ), ಸತೀಸ್‌ ಚಂದ್ರ ದುಬೆ, ಶಂಭು ಶರಣ್‌ ಪಟೇಲ್‌ (ಬಿಜೆಪಿ), ಖೀರು ಮಹತೋ (ಜೆಡಿಯು) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಕೈ ಶಾಸಕರು ರೆಸಾರ್ಟ್‌ನಲ್ಲಿ!
ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ರಾಜಸ್ಥಾನದ ಕಾಂಗ್ರೆಸ್‌ ಅಭ್ಯರ್ಥಿಗಳ ಜತೆಗೆ ಬಿಜೆಪಿ ಕುದುರೆ ವ್ಯಾಪಾರ ನಡೆಸಬಹುದು ಎಂಬ ಭೀತಿಗೆ ಒಳಗಾಗಿರುವ ಕಾಂಗ್ರೆಸ್‌, ತನ್ನ 70 ಶಾಸಕರನ್ನು ರಾಜಸ್ಥಾನದ ಉದಯಪುರದ ರೆಸಾರ್ಟ್‌ ಒಂದಕ್ಕೆ ರವಾನಿಸಿರುವುದಾಗಿ ಹೇಳಿಕೊಂಡಿದೆ. ಇವರಲ್ಲಿ ಕೆಲವರು ಸಚಿವರು ಇದ್ದಾರೆಂದು ಪಕ್ಷ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next