ನರಗುಂದ: 2020-21ನೇ ಸಾಲಿನ ಹಿಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಉತ್ಪನ್ನ ಪ್ರತಿ ಕ್ವಿಂಟಲ್‌ಗೆ 5,100 ರೂ. ದರದಲ್ಲಿ ಖರೀದಿಗೆ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.
ಒಬ್ಬ ರೈತರಿಂದ ಕನಿಷ್ಟ 15 ಕ್ವಿಂಟಲ್ ಕಡಲೆ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ(ಮಾರ್ಕಫೆಡ್) ಸಂಸ್ಥೆಯಿಂದ ರಾಜ್ಯದಲ್ಲಿ ಕಡಲೆ ಖರೀದಿ ಮಾಡಲಾಗುತ್ತಿದ್ದು, ತಾಲೂಕಿನಲ್ಲಿ ಸಂಸ್ಥೆ ಪರವಾಗಿ ನರಗುಂದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್) ವತಿಯಿಂದ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.
10 ಕೇಂದ್ರಗಳು: ತಾಲೂಕಿನಲ್ಲಿ ಚಿಕ್ಕನರಗುಂದ, ಜಗಾಪುರ, ಕೊಣ್ಣೂರ, ಶಿರೋಳ, ಸುರಕೋಡ, ಸಂಕಧಾಳ ಪಿಕೆಪಿಎಸ್, ನರಗುಂದದ ಟಿಎಪಿಸಿಎಂಎ ಸ್ ಹಾಗೂ ಪಟ್ಟಣದ ರೈತ ಸಂಜೀವಿನಿ ಫಾರ್ಮಸ್ ಪ್ರೋಡ್ನೂಸಿಂಗ್ ಕಂಪನಿ ವತಿಯಿಂದ ಸೇರಿ ಒಟ್ಟು 10 ಖರೀದಿ ಕೇಂದ್ರ ತೆರೆಯಲಾಗಿದೆ.
ನೋಂದಣಿ ಪ್ರಾರಂಭ: ಫೆ.24ರಿಂದ ಕಡಲೆ ಕಾಳು ಮಾರಾಟಕ್ಕೆ ರೈತರಿಂದ ಹೆಸರು ನೋಂದಣಿ ಪ್ರಾರಂಭವಾಗಿದ್ದು, ಏ.30ರವರೆಗೆ ಕಾಲಾವಕಾಶ ನೀಡಲಾಗಿದೆ. ಮಾ.15ರಿಂದ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮೇ 14ರವರೆಗೆ ನೋಂದಾಯಿತ ರೈತರಿಂದ ಕಡಲೆ ಕಾಳು ಖರೀದಿಸಲಾಗುತ್ತಿದೆ.
ಪಟ್ಟಣದ ಎಪಿಎಂಸಿ ಪ್ರಾಂಗಣದ ಗೋದಾಮಿನಲ್ಲಿ ಟಿಎಪಿಸಿಎಂಎಸ್ ವತಿಯಿಂದ ಕಡಲೆ ಖರೀದಿ ಕೇಂದ್ರದಲ್ಲಿ ಬುಧವಾರ 50ಕ್ಕೂ ಹೆಚ್ಚು ರೈತರು ಹೆಸರು ನೊಂದಾಯಿಸಿದ್ದಾರೆ. ಹೆಸರು ನೋಂದಣಿಗೆ ರೈತರ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಒಟ್ಟಾರೆ ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ಓರ್ವ ರೈತ ಖಾತೆದಾರರಿಂದ ಕನಿಷ್ಟ 15 ಕ್ವಿಂಟಲ್ ಕಡಲೆ ಉತ್ಪನ್ನ, ಕ್ವಿಂಟಲ್‌ಗೆ 5,100 ರೂ.ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಕೃಷಿ ಅಧಿಕಾರಿಗಳ ಮಾಹಿತಿಯಂತೆ ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಕಡಲೆ ಬಿತ್ತನೆಯಾಗಿದೆ.
ಸಿದ್ಧಲಿಂಗಯ್ಯ ಮಣ್ಣೂರಮಠ