ಕುಷ್ಟಗಿ: ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಹಸಿರು ಕೀಟಬಾಧೆ ಕಾಣಿಸಿಕೊಂಡಿದೆ. ಈ ಕೀಡಿ ಕಾಟ ನಿಯಂತ್ರಣಕ್ಕಾಗಿ ರೈತರು ಹಲವು ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ. ಪ್ರತಿ ವರ್ಷ ಕಡಲೆ ಮೊಗ್ಗು ಬಿಡುವ ಹಂತದಲ್ಲಿ ಕೀಡೆ ಬಾಧೆ ಇರುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಬಿತ್ತನೆ ನಂತರದ ನಾಟಿಯಾದ ಎಳೆಯ ಬೆಳೆಗೆ ಕೀಡೆ ಮರಿಗಳು ಹೇರಳವಾಗಿವೆ. ಕಡಲೆ ಎಲೆಗಳ ಮೇಲೆ ಮೊಟ್ಟೆಗಳು ಕಾಣಿಸುತ್ತಿದ್ದು ಮೊಟ್ಟೆ ಇಟ್ಟಿರುವ ಎಲೆಗಳು ಒಣಗುತ್ತಿವೆ. ಸದ್ಯ 25-3 0 ದಿನಗಳ ಕಡಲೆ ಬೆಳೆ ಇದ್ದು, 20 ದಿನಗಳ ಬೆಳೆ ಇರುವಾಗಲೇ ಕೆಲವು ರೈತರು ಈ ಕೀಟಬಾಧೆ ಬರಲಿ, ಬಾರದಿರಲಿ ಎನ್ನುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಫೇನೋಪಾಸ್ ಔಷಧ ಸಿಂಪಡಣೆ ಮಾಡಿದ್ದಾರೆ.
ನಂತರದ ಅವಧಿ ಯಲ್ಲಿ ಬಿತ್ತನೆಯಾದ ಬೆಳೆಗೆ ಇದೀಗ ಹಸಿರು ಕೀಟ ಕಂಡು ಬಂದಿದ್ದು, ಈ ಕೀಟ ಎಲೆ ಭಾಗ ತಿನ್ನುತ್ತಿದ್ದು, ಇದರ ಹತೋಟಿಗೆ ಸಾಮೂಹಿಕವಾಗಿ ಔಷಧ ನಿಯಂತ್ರಣದ ಮೂಲಕ ಕೀಟಬಾಧೆ ನಿಯಂತ್ರಿಸುತ್ತಿದ್ದಾರೆ.
ಕಡಲೆಗೆ ಹೆಲಿಕಾರ್ಪ್ ಆರ್ಮಿಜರ್ ಎನ್ನುವ ಕೀಟದ ಹಾವಳಿ ಜೋರಾಗಿದ್ದು, ಇದು ಸಸಿ ಚಿಗುರು, ಹಸಿರೆಲೆ ತಿನ್ನುತ್ತಿದ್ದು, ಇದರ ನಿಯಂತ್ರಣಕ್ಕಾಗಿ ರೈತರು ಪ್ರಫೇನೋಫಾಸ್ ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಸಿಂಪಡಿಸುವುದರಿಂದ ನಿಯಂತ್ರಣಕ್ಕೆ ಬರಲಿದೆ. ಈ ಕೀಟಬಾಧೆ ತೀವ್ರವಾದಲ್ಲಿ ಕೋರೋಜಿನ್ 3 ಎಂ.ಎಲ್‌ಗೆ ಪ್ರತಿ ಲೀಟರ್‌ನಂತೆ ಸಿಂಪಡಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ತಿಳಿಸುತ್ತಾರೆ.
ಸಕಾಲಕ್ಕೆ ಹಿಂಗಾರು ಹಂಗಾಮಿಗೆ ರೈತರು ನಿರೀಕ್ಷಿಸಿದಂತೆ ಮಳೆಯಾಗಿದೆ. ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು ಹಿಂಗಾರು ಹಂಗಾಮಿಗೆ ವಿವಿಧ ಬೆಳೆಗಳ ಒಟ್ಟು 36,600 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 14 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಕಡಲೆ ಬಿತ್ತನೆಯಾಗಿದೆ. ಕಡಲೆಗೆ ಕೀಟಬಾಧೆ ಆವರಿಸುತ್ತಿದ್ದು, ರೈತರು ಸಮಗ್ರ ಕೀಟ ನಿರ್ವಹಣೆ ಪದ್ಧತಿ ಅನುಸರಿಸುವುದು ಸೂಕ್ತ. ಈ ಕೀಡಿ ಬಾಧೆ ನಿಯಂತ್ರಿಸಲು ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಕುಷ್ಟ
ಕಡಲೆ ಬೆಳೆಗೆ ಔಷಧೋಪಚಾರ ಸಕಾಲಿಕವಾಗಿ ಮಾಡಿದರೆ ಮಾತ್ರ ಬೆಳೆ ನಿರೀಕ್ಷಿಸುವಂತಾಗಿದೆ. ಕಡಲೆ ಮೊಗ್ಗು, ಹೂವಾಡುವ ಹಂತದಲ್ಲಿಯೂ ಔಷಧೋಪಚಾರ ಕೈಗೊಳ್ಳಬೇಕಿದ್ದು, ಔಷಧಿ ಹಾಗೂ ಸಿಂಪಡಣೆ ಖರ್ಚು ಹೆಚ್ಚುವರಿಯಾಗುತ್ತಿದೆ.
ಶಿವಪ್ಪ ನಾಯಕವಾಡಿ, ರೈತ