ನಂಜನಗೂಡು: ಗರ್ಭಿಣಿಯರಿಗೆ ಸರ್ಕಾರ ವಿತರಿಸುತ್ತಿರುವ ಕಡ್ಲೆಕಾಯಿ ಮಿಠಾಯಿ ಹುಳು ಹಿಡಿದಿದ್ದು, ಅದನ್ನು ತಿನ್ನಲು ಯೋಗ್ಯವೇ ಎಂದು ತಾಪಂ ಸದಸ್ಯ ಸಿದ್ದರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಹಿಳಾ ಹಾಗೂ ಮಕ್ಕಳ ಇಲಾಖೆಯ ಲೋಪದೋಷಗಳನ್ನು ಸದಸ್ಯರು ತೆರದಿಟ್ಟರು.
ಈ ವಿಷಯ ಪ್ರಾಸ್ತಪಿಸಿದ ಸದಸ್ಯ ಸಿದ್ದರಾಜೇಗೌಡ, ಮಹಿಳೆಯರಲ್ಲಿ ಪೌಷ್ಟಿಕಾಂಶ ಕಡಿಮೆಯಾಗಬಾರದು ಎಂಬ ಸದುದ್ದೇಶದಿಂದ ಸರ್ಕಾರ ಪೌಷ್ಟಿಕ ಆಹಾರ ನೀಡುತ್ತಿದ್ದು, ಆದರೆ, ಹುಳು ಹಿಡಿದ ಕಡ್ಲೆ ಕಾಯಿ ಮಿಠಾಯಿ ನೀಡಲಾಗುತ್ತಿದೆ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒಗಳಾದ ಗೀತಾ ಹಾಗೂ ಲಕ್ಷ್ಮೀ, ಇವುಗಳನ್ನು ನಾವು ಖರೀದಿಸುವುದಿಲ್ಲ. ಅಂಗನವಾಡಿಗಳ ಆಹಾರವನ್ನು ಸಂಸ್ಕರಿಸಲು ಪ್ರತ್ಯೇಕ ಸಂಸ್ಥೆ ಇದೆ ಎಂದು ಸಮಜಾಯಶಿ ನೀಡಲು ಪ್ರಯತ್ನಿಸಿದರು. ಆದರೆ, ಇವರ ವಾದಕ್ಕೆ ಒಪ್ಪದ ಸದಸ್ಯರು, ಹುಳು ಹಿಡಿದ ಆಹಾರ ಪದಾರ್ಥ ವಿತರಣೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಸ್ಪತ್ರೆ ಬಾಗಿಲಿಗೆ ದೀಪವಿಲ್ಲ: ಹುಲ್ಲಹಳ್ಳಿಯ ಸಾರ್ವಜನಿಕ ಆಸ್ಪತ್ರೆಯ ಸುತ್ತಮುತ್ತ ಕತ್ತಲು ಆವರಿಸಿದ್ದು, ದೀಪ ಅಳವಡಿಸುವಂತೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಶಿವಣ್ಣ ಅವಲತ್ತುಕೊಂಡರು. ಗ್ರಾಮೀಣ ಆಸ್ಪತ್ರೆಗೆ ದೀಪ ಅಳವಡಿಸುವುದು ತಾಪಂ ಜವಾಬ್ದಾರಿಯಲ್ಲ. ಈ ಕುರಿತು ಗ್ರಾಮ ಪಂಚಾಯಿತಿಗೆ ಆದೇಶ ನೀಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸು ಉತ್ತರಿಸಿದರು.
3 ತಿಂಗಳ ಬೆಳೆ ಪರಿಶೀಲಿಸಲು 6 ತಿಂಗಳು: ಸದಸ್ಯೆ ಸವಿತಾ ರಂಗನಾಥ ಮಾತನಾಡಿ, ತಾಲೂಕಿನಾದ್ಯಂತ ವಿವಿಧ ಬೆಳೆಗಳು ಹಾನಿಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಅಲ್ಪಾವಧಿ ಮೂರು ತಿಂಗಳ ಬೆಳೆಯನ್ನು ಪರೀಕ್ಷಿಸಲು ಆರು ತಿಂಗಳು ಸಮಯ ತೆಗೆದುಕೊಳ್ಳುತ್ತಾರೆ. ಹೀಗಾದರೆ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಕಾಲದಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಹಾಸ್ಟೆಲ್‌ಗಳಲ್ಲಿ ರ್ಯಾಗಿಂಗ್: ತಾಲೂಕಿನ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ರ್ಯಾಗಿಂಗ್ ನಡೆಯುತ್ತಿದೆ. ಅದರೆ, ಸಂಬಂಧಿಸಿದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ರಾತ್ರಿ ವೇಳೆ ವಾರ್ಡನ್ ಇರುವುದಿಲ್ಲ ಎಂದು ಸದಸ್ಯರಾದ ಸಿ.ಎಂ. ಮಹದೇವು, ಶಿವಣ್ಣ, ರಾಮು, ಸಿದ್ದರಾಜೇಗೌಡ ಮತ್ತಿತರರು ದೂರಿದರು. ಮುಂದುವರಿದು, ಅನೇಕ ವಿದ್ಯಾರ್ಥಿಗಳು ರ್ಯಾಗಿಂಗ್‌ನಿಂದ ಹಾಸ್ಟೆಲ್ ತೊರೆಯಲಾರಂಭಿಸಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಬಿಸಿಎಂ ಅಧಿಕಾರಿ ಸಹದೇವು, ವಸತಿ ನಿಲಯಗಳಲ್ಲಿ ವಾರ್ಡನ್ ಗೈರು ಕುರಿತು ವಿಚಾರಣೆ ನಡೆಸುವುದಾಗಿ ತಿಳಿಸಿದರಲ್ಲದೇ ರ್ಯಾಗಿಂಗ್ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಹೇಳಿದಾಗ ಸದಸ್ಯರು ಮಧ್ಯಪ್ರವೇಶಿಸಿ, ಈ ವಿಷಯ ಗೊತ್ತಿಲ್ಲ ಎನ್ನುವುದು ನಿಮ್ಮ ದೌರ್ಬಲ್ಯ. ನೀವೇ ಅತ್ತ ಸುಳಿಯುತ್ತಿಲ್ಲ ಎಂದು ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಗೋಂದರಾಜು, ನಿಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ಇಲ್ಲದಿದ್ದರೆ ಬೇರೆಡೆ ಹೋಗಿ ಎಂದು ತರಾಟೆಗೆ ತೆಗೆದುಕೊಂಡರು.