ಧಾರವಾಡ: ನೋಂದಣಿ, ಖರೀದಿ ಪ್ರಕ್ರಿಯೆ ಆರಂಭ ಮಾಡುವಲ್ಲಿ ಆದ ವಿಳಂಬ, ಬೆಂಬೆಲೆ ನಿಗದಿಗಿಂತ ಮಾರುಕಟ್ಟೆಯಲ್ಲಿಯೇ ಅಧಿಕ ಬೆಲೆ ಹಾಗೂ ಬೆಂಬೆಲೆಯಡಿ ಮಾರಾಟ ಮಾಡಿದರೂ ಖಾತೆಗೆ ಹಣ ಜಮೆ ವಿಳಂಬದ ಆತಂಕ. ಈ ಮಧ್ಯೆ ಬೆಂಬೆಲೆಯಡಿ ಬೆಳೆ ಮಾರಾಟ ಮಾಡಿದರೂ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವತನಕ ಪ್ರತಿವರ್ಷವೂ ತಿಂಗಳುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಕಡಲೆ ಬೆಳೆದ ರೈತರದ್ದು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಬೆಂಬೆಲೆಯಡಿ ಖರೀದಿ ಕೇಂದ್ರಗಳಲ್ಲಿ ಕಡಲೆ ಮಾರಾಟಕ್ಕೆ ರೈತರ ನೋಂದಣಿ ಗಣನೀಯ ಕುಸಿತಗೊಂಡಿದ್ದು, ಇದರ ಜತೆಗೆ ನೋಂದಣಿ ಮಾಡಿದವರ ಪೈಕಿಯೂ ಕೆಲ ರೈತರು ಕೇಂದ್ರಗಳಲ್ಲಿ ಮಾರಾಟ ಮಾಡಲು ಹಿಂದೇಟು ಹಾಕಿದ ಪರಿಣಾಮ ಜಿಲ್ಲೆಯಲ್ಲಿ ಬೆಂಬೆಲೆಯಡಿ ಕಡಲೆ ಖರೀದಿಯೂ ಗಣನೀಯವಾಗಿ ಕುಸಿದಿದೆ. ಕುಸಿದ ನೋಂದಣಿ: 2020-21 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳನ್ನು ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ 5,100 ರೂ.ಗಳಂತೆ ಜಿಲ್ಲೆಯಲ್ಲಿ ಆರಂಭಿಸಿರುವ 16 ಖರೀದಿ ಕೇಂದ್ರಗಳಲ್ಲಿ ಫೆ.15 ರಿಂದ ಏ.30ರವರೆಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಹೆಸರು ನೋಂದಣಿ ಮಾಡಲು ರೂಪಿಸಿದ್ದ ತಂತ್ರಾಂಶವನ್ನು ಕೇಂದ್ರಗಳಿಗೆ ತಲುಪಲು ವಿಳಂಬ ಆಗಿದ್ದರಿಂದ ಫೆ.24ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡು ಏ.30ಕ್ಕೆ ಮುಕ್ತಾಯಗೊಂಡಿದೆ. ಈ ಅವಧಿಯೊಳಗೆ 9894 ಜನ ರೈತರಷ್ಟೇ ಹೆಸರು ನೋಂದಣಿ ಮಾಡಿದ್ದು, ಕಳೆದ ವರ್ಷ 24ಸಾವಿರಕ್ಕೂ ಹೆಚ್ಚು ರೈತರು ಹೆಸರು ನೋಂದಣಿ ಮಾಡಿದ್ದರು. ಹೀಗಾಗಿ ನೋಂದಣಿ ಗಣನೀಯವಾಗಿ ಕುಸಿದಂತಾಗಿದೆ.
ಕಡಲೇ ಖರೀದಿಯಲ್ಲೂ ಕುಸಿತ: ಕಳೆದ ವರ್ಷ ಬೆಂಬೆಲೆಯಡಿ ತೆರೆದಿದ್ದ ಖರೀದಿ ಕೇಂದ್ರಗಳಲ್ಲಿ 24 ಸಾವಿರಕ್ಕೂ ಹೆಚ್ಚು ರೈತರಿಂದ 2ಲಕ್ಷ 8 ಸಾವಿರ ಕ್ವಿಂಟಲ್ ನಷ್ಟು ಖರೀದಿಯಾಗಿತ್ತು. ಆದರೆ ಈ ವರ್ಷ ರೈತರ ಹೆಸರು ನೋಂದಣಿ ಜತೆಗೆ ಖರೀದಿ ಪ್ರಮಾಣವೂ ಗಣನೀಯ ಕುಸಿತವಾಗಿದೆ. ಫೆ.22ರಿಂದ ಮೇ 14ರವರೆಗೆ ರೈತರಿಂದ ಕಡಲೆ ಕಾಳುಗಳನ್ನು ಈ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಆಗಬೇಕಿತ್ತು. ಆದರೆ ಅಗತ್ಯ ಸಿದ್ಧತೆ ಕೊರತೆಯಿಂದ ಬರೋಬ್ಬರಿ ಒಂದು ತಿಂಗಳ ವಿಳಂಬ ಬಳಿಕ ಮಾರ್ಚ್ ತಿಂಗಳ ಅಂತ್ಯದಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಸದ್ಯ ಮೇ 14ರವರೆಗೆ ಖರೀದಿಗೆ ಅವಕಾಶವಿದ್ದು, ಆದರೆ ಮೇ 3ರ ಅಂತ್ಯಕ್ಕೆ ನೋಂದಣಿ ಮಾಡಿಸಿದ್ದ 9894 ರೈತ ಪೈಕಿ 5911 ರೈತರಷ್ಟೇ ಕಡಲೆ ಮಾರಾಟ ಮಾಡಿದ್ದು, ಕೇವಲ 71,981 ಕ್ವಿಂಟಲ್‌ನಷ್ಟೇ ಖರೀದಿಯಾಗಿದೆ.
ಇನ್ನು ಮಾರಾಟ ಮಾಡಲು 10ದಿನವಿದ್ದು, 3983 ರೈತರು ತಮ್ಮ ಬೆಳೆ ಮಾರುವುದು ಬಾಕಿ ಉಳಿದಿದೆ. ಆದರೆ ಬೆಂಬೆಲೆಗಿಂತ ಮಾರುಕಟ್ಟೆಯಲ್ಲಿಯೇ ಅಧಿಕ ಬೆಲೆ ಸಿಕ್ಕಿರುವ ಪರಿಣಾಮ ರೈತರು ಬೆಳೆ ಮಾರಾಟಕ್ಕೆ ಹಿಂದೇಟು ಹಾಕಿದ್ದಾರೆ. ಇದೀಗ ಮೇ 14 ರವರೆಗೆ ಖರೀದಿ ಪ್ರಕ್ರಿಯೆ ಇರಲಿದ್ದು, ಆದರೆ ರೈತರ ಹಿಂದೇಟಿನಿಂದ ಅಷ್ಟರೊಳಗೆ ಖರೀದಿ ಪ್ರಕ್ರಿಯೆಯೇ ಮುಕ್ತಾಯಗೊಂಡಂತಾಗಿದೆ.