Advertisement
ಮುಡಿಪಿನಡ್ಕ-ಮೈಂದನಡ್ಕ ಜಿ.ಪಂ. ರಸ್ತೆಯ ತಳೆಂಜಿ ಗುಡ್ಡದ ಸಮೀಪದ ಚಂದು ಕ್ಲೂಡು ರಸ್ತೆಯ ಬದಿ ಒಂದು ಲೋಡ್‌ನಷ್ಟು ಕೋಳಿ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಗೋಣಿಗಳು ಪತ್ತೆಯಾಗಿವೆ. ಸುರಿ ಯುತ್ತಿರುವ ಮಳೆಗೆ ತ್ಯಾಜ್ಯ ನೀರು ಸುತ್ತಲಿನ ಪರಿಸರವನ್ನು ಮಲಿನಗೊಳಿಸಿದೆ. ಸ್ಥಳೀಯರು ಈ ಕುರಿತು ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ ಅವರಿಗೆ ಮಾಹಿತಿ ನೀಡಿದ್ದಾರೆ. ತಳೆಂಜಿ ಗುಡ್ಡದಲ್ಲಿ ಒಂದು ಬದಿಯಲ್ಲಿ ತ್ಯಾಜ್ಯ ಎಸೆದು ಮಲಿನವಾದರೆ ಮತ್ತೊಂದು ಕಡೆ ಸಮಾರಂಭದ ಪ್ಲಾಸ್ಟಿಕ್ ಬಾಟಲ್‌ಗಳು, ಕಾಗದದ ಕಸಗಳ ರಾಶಿ ಇದೆ.
ಹಲವು ವರ್ಷದ ಹಿಂದೆ ಪಡುವನ್ನೂರು ಗ್ರಾಮದ ಕನ್ನಡ್ಕ ಎಂಬಲ್ಲಿ ಕೋಳಿತ್ಯಾಜ್ಯವನ್ನು ಎಸೆಯಲಾಗಿತ್ತು. ಇದರಿಂದ ಪರಿಸರ ಕಲುಷಿತಗೊಂಡಿತ್ತು. ಗ್ರಾಮಸ್ಥರು, ಇಲಾಖೆಗಳ ಸಹಯೋಗದಲ್ಲಿ ಕೋಳಿ ತ್ಯಾಜ್ಯವನ್ನು ತೆರವುಗೊಳಿಸಿ ವಿಲೇವಾರಿ ಮಾಡಲಾಯಿತು. ತ್ಯಾಜ್ಯ ಎಸೆದವರ ಪತ್ತೆಗಾಗಿ ಪೊಲೀಸರ ಜತೆ ಗ್ರಾಮಸ್ಥರೇ ತಂಡವನ್ನು ರಚಿಸಿ ಪತ್ತೆ ಕಾರ್ಯಕ್ಕೆ ಕಾದು ಕುಳಿತಿದ್ದರು. ಆದರೆ ಮುಂದೆ ಇಂತಹ ಘಟನೆ ಮರುಕಳಿಸಲೇ ಇಲ್ಲ. ಹಲವು ಕಾಲದ ಬಳಿಕ ಬಡಗನ್ನೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಕೋಳಿ ತ್ಯಾಜ್ಯ ಕಂಡು ಬಂದಿದ್ದು, ಪೊಲೀಸ್ ಇಲಾಖೆ ದಾನಿಗಳು ಕೊಡುಗೆಯಾಗಿ ನೀಡಿದ ಆಯಕಟ್ಟಿನ ಪ್ರದೇಶದಲ್ಲಿ ಆಳವಡಿಸಿದ ಸಿಸಿ ಕೆಮರಾ ನೆರವಾಗಲಿದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ. ಕೋಳಿತ್ಯಾಜ್ಯವನ್ನು ಲಾರಿಗಳಲ್ಲಿ ತಂದು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗುವ ತಂಡ ಇದೆ ಎನ್ನುವ ಬಲವಾದ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ಬಲ್ನಾಡು-ಬೆಟ್ಟಂಪಾಡಿ ಗ್ರಾಮದ ಗಡಿಭಾಗದ ಸರೋಳಿಕಾನದಲ್ಲಿ ಬುಧವಾರ ಲೋಡುಗಟ್ಟಲೆ ಕೋಳಿತ್ಯಾಜ್ಯ ರಾಶಿ ಹಾಕಿದ ಘಟನೆ ನಡೆದ 24 ಗಂಟೆಗಳಲ್ಲೇ ಇಂತಹದೇ ಮತ್ತೊಂದು ಘಟನೆ ನಡೆದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕೇರಳ ಪ್ರದೇಶದಿಂದ ಕೋಳಿ ತ್ಯಾಜ್ಯವನ್ನು ಸಂಗ್ರಹಿಸಿ, ಕರ್ನಾಟಕ ಭಾಗಕ್ಕೆ ತಂದು ಸುರಿಯುವ ಸಾಧ್ಯತೆ ಇದೆ.
Related Articles
ಪಂಚಾಯತ್‌ನಿಂದ ಈಶ್ವರಮಂಗಲ ಪೊಲೀಸ್ ಹೊರಠಾಣೆಗೆ, ಸಂಪ್ಯ ಠಾಣೆಗೆ ಮೌಖಿಕ ದೂರು ನೀಡಲಾಗಿದೆ. ತ್ಯಾಜ್ಯದ ಮೇಲೆ ಮಣ್ಣನ್ನು ಹಾಕಿ ವಿಲೇವಾರಿ ಮಾಡಲಾಗುವುದು. ಕೋಳಿತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕು.
– ಕೇಶವ ಗೌಡ ಕನ್ನಯ,
ಅಧ್ಯಕ್ಷರು, ಬಡಗನ್ನೂರು ಗ್ರಾ.ಪಂ.
Advertisement