ವಾಡಿ: ಇತ್ತೀಚೆಗಷ್ಟೆ ಶಂಕಿತ ಚಿಕನ್ ಫಾಕ್ಸ್ (ಸಿಡುಬು) ರೋಗದಿಂದ ಇಡೀ ಕುಟುಂಬ ನರಳಿ ಇಬ್ಬರು ಬಾಲಕರು ಮೃತಪಟ್ಟ ನಾಲವಾರ ಸ್ಟೇಷನ್ ತಾಂಡಾ ಬಡಾವಣೆಯ ಸಂತ್ರಸ್ತರ ಮನೆಗೆ ಶನಿವಾರ ಭೇಟಿ ನೀಡಿದ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಪೋಷಕರಿಗೆ ಸಾಂತ್ವನ ಹೇಳಿದರು.
ಸಿಡುಬು ಸೋಂಕಿತ ಇಬ್ಬರು ಮಕ್ಕಳೊಂದಿಗೆ ಸ್ವತಃ ತಾನೂ ಚಿಕಿತ್ಸೆ ಪಡೆದು ಮೊನ್ನೆಯಷ್ಟೇ ಗುಣಮುಖಳಾಗಿ ಆಸ್ಪತ್ರೆಯಿಂದ ಮನೆಗೆ ಬಂದಿರುವ ತಾಯಿ ಹಫೀಜಾಬೇಗಂ ಅವರು ತಮ್ಮ ಇಬ್ಬರು ಮಕ್ಕಳಾದ ಇಮ್ರಾನ್ ಮತ್ತು ರಹೆಮಾನ್ ಅವರನ್ನು ನೆನೆದು ಗದ್ಗದಿತರಾದರು. ಶಾಸಕ ಪ್ರಿಯಾಂಕ್ ಕುಟುಂಬ ಸದಸ್ಯರಿಗೆ ಸಮಾಧಾನ ಹೇಳಿದರು.
ಚಿಕಿತ್ಸೆಯಿಂದ ಗುಣಪಡಿಸಬಹುದಾದ ಶಂಕಿತ ಚಿಕನ್ ಫಾಕ್ಸ್ ರೋಗ ಮಾರಣಾಂತಿಕವಾಗಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. ಚಿಕಿತ್ಸೆ ಪಡೆದುಕೊಂಡ ವಿವಿಧ ಆಸ್ಪತ್ರೆಗಳ ದಾಖಲೆಗಳನ್ನು ಪರಿಶೀಲಿಸಿದರು.
ಸ್ಥಳದಲ್ಲೇ ಹಾಜರಿದ್ದ ತಾಲೂಕು ವೈದ್ಯಾಧಿಕಾರಿ ಅಮರದೀಪ ಪವಾರ ಅವರಿಂದ ರೋಗದ ಕುರಿತು ಮಾಹಿತಿ ಪಡೆದರು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಇಬ್ಬರು ಬಾಲಕರನ್ನು ರಕ್ಷಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೃತಪಟ್ಟ ಬಾಲಕರ ಪೋಷಕರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಶಾಸಕ ಖರ್ಗೆ, ಇಂಥಹ ಸಿಡುಬು ರೋಗ ಇತರರಿಗೆ ಹರಡಿದ್ದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.
ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಟಿಎಚ್‌ಒ ಡಾ| ಅಮರದೀಪ ಪವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಕಾಂಗ್ರೆಸ್ ಹಿರಿಯ ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಗುರುಗೌಡ ಇಟಗಿ, ಟೋಪಣ್ಣ ಕೋಮಟೆ, ಅಬ್ದುಲ್ ರಸೂಲ್, ಶಿವುರೆಡ್ಡಿಗೌಡ ಸೋಮ ರೆಡ್ಡಿ, ಅಬ್ದುಲ್ ಅಜೀಜ್‌ಸೇಠ ರಾವೂರ ಹಾಗೂಕಾರ್ಯಕರ್ತರು ಪಾಲ್ಗೊಂಡಿದ್ದರು.