ಹರಪನಹಳ್ಳಿ: ಇತ್ತೀಚೆಗೆ ತಾಲೂಕಿನ ದ್ಯಾಪನಾಯಕನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿಕನ್ ಫಾಕ್ಸ್ ಎಂಬ ಚರ್ಮ ರೋಗ ಇದೀಗ ಪಟ್ಟಣದ ಖಾಸಗಿ ಶಾಲೆಯ 100ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, ಮೈತುಂಬಾ ಕೆಂಪು ಬಣ್ಣದ ಗುಳ್ಳೆಗಳು, ಮೈ-ತುರಿಕೆ, ಜ್ವರದ ಬಾಧೆಯಿಂದ ನರಳುತ್ತಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ.
ಪಟ್ಟಣದ ಹೊರ ವಲಯದಲ್ಲಿರುವ ಪರ್ಲ್ ಪಬ್ಲಿಕ್ ಶಾಲೆಯಲ್ಲಿ ಕಳೆದ ಒಂದು ವಾರದಿಂದ ಚಿಕನ್ ಫಾಕ್ಸ್ ಚರ್ಮ ರೋಗ ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಶಾಲೆಯಲ್ಲಿ ಒಟ್ಟು 500 ಮಕ್ಕಳು ಅಭ್ಯಾಸ ಮಾಡುತ್ತಿದ್ದು, 100ಕ್ಕೂ ಅಧಿಧಿಕ ಮಕ್ಕಳು ಇದೀಗ ಚಿಕನ್ ಫಾಕ್ಸ್ ಅಂಟು ರೋಗಕ್ಕೆ ತುತ್ತಾಗಿದ್ದಾರೆ.
ಆರಂಭದಲ್ಲಿ ಮಕ್ಕಳಿಗೆ ಜ್ವರ ಕಾಣಿಸಿಕೊಂಡು ನಂತರ ಗುಳ್ಳೆಗಳು ಕೆಂಪಾಗಿ ಕಾಣಿಸಿಕೊಂಡು ಮೈ-ಕೈ ನೋವು, ತುರಿಕೆ ಪ್ರಾರಂಭವಾಗಿದೆ. ಆರಂಭದಲ್ಲಿ ಒಂದಿಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ರೋಗ ಇದೀಗ ಎಲ್‌ಕೆಜಿ ಮಕ್ಕಳಿಂದ ಹಿಡಿದು 6ನೇ ತರಗತಿವರೆಗಿನ ಮಕ್ಕಳಿಗೂ ಹಬ್ಬಿದೆ.
ಒಬ್ಬರಿಂದ ಒಬ್ಬರಿಗೆ ಉಸಿರಿನ ಮೂಲಕ ರೋಗ ಹರಡುತ್ತಿರುವುದರಿಂದ ಗುರುವಾರ 50 ಹಾಗೂ ಶುಕ್ರವಾರ ಕೂಡ 20ಕ್ಕೂ ಹೆಚ್ಚು ಮಕ್ಕಳನ್ನು ಮಧ್ಯಾಹ್ನದ ನಂತರ ರಜೆ ನೀಡಿ ಶಾಲೆ ಸಿಬ್ಬಂದಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಅಂಟು ರೋಗವಾಗಿರುವುದರಿಂದ ಮಕ್ಕಳು ಸಂಪೂರ್ಣ ಗುಣ ಮುಖವಾಗುವವರೆಗೂ ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಆಡಳಿತ ಮಂಡಳಿ ಮನವಿ ಮಾಡಿದೆ.
ತುಂಬಾ ಸುಸ್ತು, ಮೈ-ತುರಿಕೆ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಚರ್ಮ ರೋಗಕ್ಕೆ ತುತ್ತಾದ ಶಾಲೆಯ ವಿದ್ಯಾರ್ಥಿ ಧನುಷ್, ಪುಟ್ಟರಾಜು ತಿಳಿಸಿದರು. ಚಿಕನ್ ಫಾಕ್ಸ್ ರೋಗದ ಲಕ್ಷಣ ಕಂಡು ಬಂದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಮತ್ತು ರೋಗ ವಾಸಿಯಾದ ನಂತರ ಶಾಲೆಗೆ ಬರುವಾಗ ವೈದ್ಯರಿಂದ ಫಿಟ್ ನೆಸ್ ಸರ್ಟಿಫಿಕೇಟ್ ತರುವಂತೆ ಪೋಷಕರಿಗೆ ತಿಳಿಸಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸುಮಾ ಉಪ್ಪೀನ್ ತಿಳಿಸುತ್ತಾರೆ.
ಆದರೆ ಕಳೆದ ಒಂದು ವಾರದಿಂದ ಮಕ್ಕಳಲ್ಲಿ ರೋಗದ ಲಕ್ಷಣ ಕಂಡು ಬಂದಿದ್ದರೂ ಶಾಲೆಯ ಆಡಳಿತ ಮಂಡಳಿ ರೋಗದ ಕುರಿತು ಮಕ್ಕಳಿಗೆ ಅರಿವು ಮೂಡಿಸಿಲ್ಲ. ಮುಂಜಾಗೃತವಾಗಿ ಮಕ್ಕಳ ತಪಾಸಣೆ ನಡೆಸಿ ಲಸಿಕೆ ನೀಡಿಲ್ಲ ಎಂಬುವುದು ಪೋಷಕರ ಆರೋಪ.