ಬಹುಬೇಡಿಕೆ ಇರುವ ಟೆಫ್, ಚಿಯಾ ಮತ್ತು ಕ್ವಿನೊವಾ ಬೆಳೆಗಳನ್ನೂ ಈಗ ಸರ್ಕಾರದ “ರೈತ ಸಿರಿ’ ಯೋಜನೆಗೆ ಸರ್ಕಾರ ಸೇರ್ಪಡೆ ಮಾಡಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲು ಶಿಫಾರಸು ಮಾಡಲಾಗಿದೆ. ಯೋಜನೆ ಅಡಿ ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಹಾಗೂ ಗರಿಷ್ಠ 20 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಸಿರಿಧಾನ್ಯಗಳ ಸಾಲಿಗೆ ಟೆಫ್, ಚಿಯಾ, ಕ್ವಿನೊವಾ ಕೂಡ ಸೇರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಂದಹಾಗೆ, ಉದ್ದೇಶಿತ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಇದ್ದು, ಕೆಜಿಗೆ ನೂರಾರು ರೂ. ಬೆಲೆ ಇದೆ.
ಸಮಗ್ರ ವರಾಹ ಅಭಿವೃದ್ಧಿ ಯೋಜನೆ: ಕುರಿ, ಕೋಳಿ, ಹಂದಿ, ಮೇಕೆ ಸಾಕಾಣಿಕೆ ಜತೆಗೆ ಹೈನುಗಾರಿಕೆ ಅಭಿವೃದ್ಧಿ ಅನ್ವೇಷಣೆಗೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ, ಸಮಗ್ರ ನೀತಿ ರೂಪಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಹಂದಿಗಳ ಸಾಕಾಣಿಕೆ ಮತ್ತು ಉತ್ಪಾದನೆ ಗುಣಮಟ್ಟದಲ್ಲಿ ಸುಧಾರಣೆ ತರಲು ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳಲು ಸಮಗ್ರ ವರಾಹ ಅಭಿವೃದ್ಧಿ ಯೋಜನೆ ರೂಪಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಐದು ಕೋಟಿ ರೂ. ಮೀಸಲಿಡಲಾಗಿದೆ.
ರಾಮನಗರದಲ್ಲಿ ರೇಷ್ಮೆ ಹುಳು ಸಂಸ್ಕರಣಾ ಘಟಕ: ರಾಮನಗರದ ಕಣ್ವ ಫಾರ್ಮ್ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೇಷ್ಮೆ ಹುಳು ಸಂಸ್ಕರಣಾ ಘಟಕ ಘೋಷಿಸಲಾಗಿದೆ. ಇದರಿಂದ ನಿತ್ಯ 30-32 ಮೆಟ್ರಿಕ್ ಟನ್ ರೇಷ್ಮೆ ಪೊರೆಹುಳು ಸಂಸ್ಕರಿಸಲು ಮೌಲ್ಯವರ್ಧಿತ ಉಪ ಉತ್ಪನ್ನಗಳ ಉತ್ಪಾದನೆ ಆಗಲಿದೆ. ಜತೆಗೆ ರೇಷ್ಮೆ ನೂಲು ಬಿಚ್ಚಣಿಕೆದಾರ (ರೀಲರ್)ರಿಗೆ ಹೆಚ್ಚು ಪ್ರಯೋಜನ ಆಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಮೀನುಗಾರರಿಗೆ ಬಂಪರ್ ಕೊಡುಗೆ: ಮೀನುಗಾರರು ಅದರಲ್ಲೂ ಮಹಿಳಾ ಮೀನುಗಾರರಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಮೀನುಗಳನ್ನು ಸಾಗಿಸಲು ದ್ವಿಚಕ್ರ ವಾಹನ ನೀಡುವುದಾಗಿ ಘೋಷಿಸಿದೆ. “ಮಹಿಳಾ ಮೀನುಗಾರ ಸಬಲೀಕರಣ’ ಯೋಜನೆ ಅಡಿ ಈ ದ್ವಿಚಕ್ರ ವಾಹನಗಳನ್ನು ಪೂರೈಸಲು ಉದ್ದೇಶಿಸಿದ್ದು, ಇದಕ್ಕಾಗಿ ಐದು ಕೋಟಿ ರೂ. ಮೀಸಲಿಡಲಾಗಿದೆ. ಮೀನುಗಾರ ಮಹಿಳೆಯರು ಮೀನು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಈ ಯೋಜನೆ ಅನುಕೂಲ ಆಗಲಿದೆ. ಅಲ್ಲದೆ, ಮೀನುಗಾರರು ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲು “ಕರ್ನಾಟಕ ಮತ್ಸ ವಿಕಾಸ ಯೋಜನೆ’ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1.5 ಕೋಟಿ ರೂ. ಇಡಲಾಗಿದೆ. ಮಂಗಳೂರಿನ ಕುಳಾಯಿಯಲ್ಲಿ ಹೊಸ ಮೀನುಗಾರಿಕೆ ಬಂದರು ಸ್ಥಾಪನೆ,
ಮುಲ್ಕಿ ಹಿನ್ನೀರಿನಲ್ಲಿ ಎರಡು ಕೋಟಿ ವೆಚ್ಚದಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕರಾವಳಿ ಮೀನು ರಫ್ತು ಸ್ಥಾವರ ನಿರ್ಮಿಸಲಾಗುವುದು. 12.5 ಕೋಟಿ ವೆಚ್ಚದಲ್ಲಿ ಇದು ತಲೆಯೆತ್ತಲಿದೆ. ಜತೆಗೆ ಉಡುಪಿಯ ಹೆಜಮಾಡಿಕೋಡಿಯಲ್ಲಿ ಕೇಂದ್ರದ ಸಹಭಾಗಿತ್ವದಲ್ಲಿ 180 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಮೀನುಗಾರಿಕೆ ಬಂದರು ನಿರ್ಮಿಸಲಾಗುವುದು. ಉಡುಪಿಯ ಹಂಗಾರಕಟ್ಟೆ ಬಂದರನ್ನು 130 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.