ಬಿಜಾಪುರ(ಛತ್ತೀಸ್‌ಗಢ): ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲರ ವಿರುದ್ಧ ಎನ್ ಕೌಂಟರ್ ನಡೆಸಲಾಗುತ್ತಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಗಾಯವಾಗಿರುವ ಘಟನೆ ನಡೆದಿದೆ.
ಪುಸ್ನಾರ್ ಮತ್ತು ಹಿರೋಲಿ ಗ್ರಾಮ ವ್ಯಾಪ್ತಿಯಲ್ಲಿ ಮಾವೋವಾದಿಗಳು ಐಇಡಿ ದಾಳಿ ನಡೆಸಲು ಯೋಜಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಐಜಿ ಬಸ್ತಾರ್ ಪಿ ಸುಂದರರಾಜ್ ಹೇಳಿದ್ದಾರೆ.
ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಗಂಗಾಳೂರು ಪೊಲೀಸ್ ಠಾಣೆಯಿಂದ ಶೋಧ ಕಾರ್ಯಾಚರಣೆ ನಡೆಸಲು ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ಕೋಬ್ರಾ ಪಡೆಯನ್ನು ಕಳುಹಿಸಲಾಯಿತು.
ಈ ವೇಳೆ ನಕ್ಸಲರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಐಜಿ ಬಸ್ತಾರ್ ಪ್ರಕಾರ, ಎನ್‌ಕೌಂಟರ್ ಸಮಯದಲ್ಲಿ 2-3 ಮಾವೋವಾದಿಗಳು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಐಜಿ ತಿಳಿಸಿದ್ದಾರೆ.
ಪ್ರಸ್ತುತ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.