ಹೊಸದಿಲ್ಲಿ: ಮುಂದಿನ ತಿಂಗಳು ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯವನ್ನು ತನ್ನತ್ತ ಸೆಳೆಯಲು ವಿಪಕ್ಷ ಬಿಜೆಪಿ ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ.
ಪ್ರತೀ ಬಾರಿಯೂ ರಾಜ್ಯದ ಚುನಾವಣೆಯಲ್ಲಿ ಈ ಸಮುದಾಯವು ನಿರ್ಣಾಯಕ ಪಾತ್ರ ವಹಿಸುತ್ತದೆ. 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯು ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿಯು ಇದೇ ಕ್ಷೇತ್ರಗಳತ್ತ ಗಮನ ನೆಟ್ಟಿದ್ದು, ಪ್ರಧಾನಿ ಮೋದಿ, ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಘಟಾನುಘಟಿಗಳು ಇಲ್ಲಿ ಸರಣಿ ರ್ಯಾಲಿಗಳನ್ನು ನಡೆಸಿದ್ದಾರೆ. ಎರಡು ಪರಿವರ್ತನಾ ಯಾತ್ರೆಗಳಿಗೂ ಇಲ್ಲೇ ಚಾಲನೆ ನೀಡಲಾಗಿದೆ.
90 ಸದಸ್ಯ ಬಲದ ಛತ್ತೀಸ್‌ಗಢ ಅಸೆಂಬ್ಲಿಯಲ್ಲಿ 29 ಸೀಟುಗಳು ಪರಿಶಿಷ್ಟ ಪಂಗಡ(ಎಸ್‌ಟಿ)ಗಳಿಗೆ ಮೀಸಲಾಗಿದ್ದು, ಈ ಪಂಗಡವು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.32ರಷ್ಟಿದೆ. ಆಡಳಿತಾರೂಢ ಕಾಂಗ್ರೆಸ್ 2018ರಲ್ಲಿ ಈ 29 ಮೀಸಲು ಕ್ಷೇತ್ರಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿತ್ತು. ಅಲ್ಲದೇ ಬುಡಕಟ್ಟು ಕಲ್ಯಾಣ ಯೋಜನೆಗಳ ಹೆಸರಿನೊಂದಿಗೆ ಈ ಬಾರಿ ಇನ್ನಷ್ಟು ಸೀಟುಗಳನ್ನು ಗೆಲ್ಲಲು ಕಾಂಗ್ರೆಸ್ ಅಣಿಯಾಗಿದೆ. ಈ ಹಿಂದೆ ಬುಡಕಟ್ಟು ಸಮುದಾಯವು ಬಿಜೆಪಿಯನ್ನೇ ಬೆಂಬಲಿಸುತ್ತಿತ್ತು. ಅನಂತರ ಬೇರೆ ಬೇರೆ ಕಾರಣಗಳಿಂದಾಗಿ ಬಿಜೆಪಿಯ ಹಿಡಿತ ಸಡಿಲಗೊಂಡಿತು. ಈಗ ಮತ್ತೆ ಈ ಸಮುದಾಯವನ್ನು ಸೆಳೆಯಲು ಮುಂದಾಗಿರುವ ಬಿಜೆಪಿ, “ಬುಡಕಟ್ಟು ಸಮುದಾಯದವರ ಮತಾಂತರ, ಸರಕಾರಿ ಉದ್ಯೋಗಗಳಲ್ಲಿ ಈ ಪಂಗಡದವರಿಗೆ ಇದ್ದ ಆದ್ಯತೆಯನ್ನು ತೆಗೆದುಹಾಕಿರುವುದು, ಮೀಸಲಾತಿಗೆ ಕೊಕ್ ನೀಡಿರುವುದು’ ಮುಂತಾದ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಪ್ರಚಾರ ಆರಂಭಿಸಿದೆ.
ಬಘೇಲ್‌ಗೆ ರಾವಣನ ರೂಪ: ಈ ನಡುವೆ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರನ್ನು ರಾವಣ ಎಂದು ಬಿಂಬಿಸಿ ವ್ಯಂಗ್ಯಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಅಪ್‌ಲೋಡ್ ಮಾಡಿದೆ. ಜತೆಗೆ ಈ ಬಾರಿ “ಭ್ರಷ್ಟಾಚಾರದ ರಾವಣ’ನನ್ನು ಸುಟ್ಟುಹಾಕಲಾಗುತ್ತದೆ ಎಂದೂ ಬರೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಘೇಲ್, “ಹಿಂದುಳಿದ ವರ್ಗಗಳು, ಬುಡಕಟ್ಟು ಜನ, ದಲಿತರಿಗೆ ಅವಮಾನ ಮಾಡುವುದು ಬಿಜೆಪಿಯ ಚಾಳಿ’ ಎಂದಿದ್ದಾರೆ.
ದೇಗುಲ ಪುನಶ್ಚೇತನದ ಭರವಸೆ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶ್ರೀಲಂಕಾದಲ್ಲಿ ಸೀತಾ ಮಾತೆಯ ದೇಗುಲ ನಿರ್ಮಿಸುವ ಯೋಜನೆಗೆ ಮರು ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಆಶ್ವಾಸನೆ ನೀಡಿದ್ದಾರೆ. ಹಿಂದೂ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಮಂಗಳವಾರ ಹಲವು ಘೋಷಣೆಗಳನ್ನು ಮಾಡಿರುವ ಅವರು, ಅರ್ಚಕರ ಗೌರವ ಧನ ಹೆಚ್ಚಳ, ವಿಮೆ, ಶ್ರೀ ರಾಮ ವನ ಗಮನಪಥದ ಅಭಿವೃದ್ಧಿ, ಪರಶುರಾಮನ ಜನ್ಮಸ್ಥಾನವಾದ ಜನಪಾವ್ ಅನ್ನು ಪವಿತ್ರ ತೀರ್ಥಸ್ಥಳ ಎಂದು ಘೋಷಣೆ, ಮೊರೆನಾದಲ್ಲಿ ರವಿದಾಸ ಪೀಠ, ರೇವಾದಲ್ಲಿ ಸಂತ ಕಬೀರ ಪೀಠ ಸ್ಥಾಪನೆಯ ಭರವಸೆಗಳನ್ನೂ ನೀಡಿದ್ದಾರೆ.
ಟಿಕೆಟ್ ಸಿಗದ ಬೆನ್ನಲ್ಲೇ ಹೃದಯಾಘಾತ!: ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕ ಉಮಾಶಂಕರ್ ಗುಪ್ತಾ(71) ಅವರಿಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಧ್ಯಪ್ರದೇಶದ ಮಾಜಿ ಗೃಹ ಸಚಿವ, ಭೋಪಾಲ್ ಮೇಯರ್ ಹಾಗೂ 3 ಬಾರಿ ಶಾಸಕರಾಗಿರುವ ಗುಪ್ತಾ ಅವರು ಈ ಬಾರಿಯೂ ಟಿಕೆಟ್‌ನ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ಅವರ ಬದಲಿಗೆ ಹೊಸ ಅಭ್ಯರ್ಥಿಗೆ ಟಿಕೆಟ್ ಘೋಷಿಸಿತ್ತು.