ರಾಯ್ ಪುರ್: ರಾಷ್ಟ್ರಪಿತ ಮಹಾತ್ಮಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡು, ಹಂತಕ ನಾಥೂರಾಮ್ ಗೋಡ್ಸೆಯನ್ನು ಹೊಗಳಿ ಹೇಳಿಕೆ ನೀಡಿರುವ ಆರೋಪದಡಿ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಮತ್ತು ಇತರರ ವಿರುದ್ಧ ಚತ್ತೀಸ್ ಗಢ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಕ್ಕಳ ಸಾವು ಅಪೌಷ್ಟಿಕತೆಯಿಂದ, ವ್ಯವಸ್ಥೆಯಿಂದಲ್ಲ; ಡಾ. ಸುಧಾಕರ್ ಸ್ಪಷ್ಟನೆ
ರಾಯ್ ಪುರ್ ನಲ್ಲಿ ಭಾನುವಾರ(ಡಿಸೆಂಬರ್ 26) ಧರ್ಮ್ ಸಂಸತ್ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಕಾಳಿಚರಣ್, ಮಹಾತ್ಮ ಗಾಂಧಿಯ ಹತ್ಯೆಯನ್ನು ಸಮರ್ಥಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಮಹಾತ್ಮಗಾಂಧಿ ಹತ್ಯೆ ಕುರಿತಂತೆ ವಿವಾದಿತ ಹೇಳಿಕೆ ನೀಡಿದ್ದ ಧರ್ಮ ಗುರು ಕಾಳಿಚರಣ್ ವಿರುದ್ಧ ರಾಯ್ ಪುರ್ ನ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಪ್ರಮೋದ್ ದುಬೆ ಅವರು ದೂರನ್ನು ದಾಖಲಿಸಿದ್ದರು.
ಈ ದೂರಿನ ಆಧಾರದ ಮೇಲೆ ಟಿಕ್ರಾಪಾರಾ ಪೊಲೀಸ್ ಠಾಣೆಯಲ್ಲಿ ಕಾಳಿಚರಣ್ ವಿರುದ್ಧ ಐಪಿಸಿ ಸೆಕ್ಷನ್ 505(2), 294ರ ಅಡಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.