Advertisement

ಚೇತನ ಯೋಜನೆಯಿಂದ ದೂರ ಉಳಿದ ಫ‌ಲಾನುಭವಿಗಳು

01:00 AM Jul 06, 2020 | Sriram |

ಉಡುಪಿ: ಆರ್ಥಿಕ ಸಮಸ್ಯೆಯಿಂದ ಲೈಂಗಿಕ ವೃತ್ತಿಗಿಳಿದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ರಾಜ್ಯ ಸರಕಾರ ಜಾರಿಗೆ ತಂದ “ಚೇತನ’ ಯೋಜನೆಯಿಂದ ಜಿಲ್ಲೆಯ ಲೈಂಗಿಕ ಕಾರ್ಯಕರ್ತರು ದೂರ ಉಳಿದಿದ್ದಾರೆ.

Advertisement

ಸರಕಾರ ಅನಿವಾರ್ಯವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು, ಹೊಸ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ “ಚೇತನ’ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಲೈಂಗಿಕ ಕಾರ್ಯ ಕರ್ತೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮುಂದಾಗುತ್ತಿಲ್ಲ.

ಮುಚ್ಚಿದ ಎನ್‌ಜಿಒ-ಸಿಗದ ಯೋಜನೆ
ಲೈಂಗಿಕ ಕಾರ್ಯಕರ್ತೆಯರು ಸಾರ್ವ ಜನಿಕವಾಗಿ ಎಲ್ಲಯೂ ತಮ್ಮ ಗುರುತು ಹೇಳಿಕೊಳ್ಳಲು ಇಚ್ಛಿಸುತ್ತಿಲ್ಲ. ಇದರಿಂದಾಗಿ ಸರಕಾರ ಸಮಾಜದಲ್ಲಿ ಈ ವರ್ಗಕ್ಕಾಗಿ ದುಡಿಯುತ್ತಿರುವ ಎನ್‌ಜಿಒ ಸಂಸ್ಥೆಗಳ ಮೂಲಕ ವೃತ್ತಿಯನ್ನು ಬಿಡಲು ಇಚ್ಛಿಸುವ ಮಹಿಳೆಯರನ್ನು ಗುರುತಿಸಿ, ಅವರಿಗೆ ಚೇತನ ಯೋಜನೆಯಡಿ ಸ್ವಉದ್ಯೋಗ ಮಾಡಲು ಆರ್ಥಿಕ ಸಹಾಯ ಮಾಡುತ್ತದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಈ ವರ್ಗಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್‌ಜಿಒ ಸಂಸ್ಥೆ ಮುಚ್ಚಿ ಹೋಗಿದೆ.

ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಲೈಂಗಿಕ ಕಾರ್ಯ ಕರ್ತರ ಕುರಿತು ಯಾವುದೇ ರೀತಿಯಾದ ಸರ್ವೆಯಾಗಲಿ ನಡೆದಿಲ್ಲ. ಅವರೇ ಮುಂದೆ ಬಂದು ಯೋಜನೆಯ ಲಾಭ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ 550 ಕಾರ್ಯಕರ್ತರು
ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಉಡುಪಿ, ಹೆಬ್ರಿ, ಕಾರ್ಕಳ, ಕಾಪು, ಬೈಂದೂರು ತಾಲೂಕಿನಲ್ಲಿ 2017ರ ಸರ್ವೆ ಅನ್ವಯ ಸುಮಾರು 550 ಲೈಂಗಿಕ ಕಾರ್ಯಕರ್ತೆಯರು ಇದ್ದರು.

Advertisement

ಬಡ್ಡಿ ರಹಿತ ಸಾಲ
ಸರಕಾರ ಇವರಿಗೆ ಸ್ವಉದ್ಯೋಗ ಆರಂಭಿಸಲು ಮೂಲ ಬಂಡವಾಳವನ್ನು ಚೇತನ ಯೋಜನೆ ನೀಡಲಿದೆ. ಇದನ್ನು ಪಡೆ ಯಲು ಬಯಸುವವರು ತಾವು ಲೈಂಗಿಕ ವೃತ್ತಿ ಬಿಡುವುದಾಗಿ ಪ್ರಮಾಣಪತ್ರ ಕೊಡಬೇಕು. ಅನಂತರವೂ ವೃತ್ತಿ ಮುಂದು ವರಿಸಿದರೆ, ಕೊಟ್ಟ ಹಣ ಸರಕಾರಕ್ಕೆ ಹಿಂದಿರುಗಿಸ ಬೇಕು. 18-60 ವರ್ಷದೊಳಗಿನ ಮಹಿಳೆಯರಿಗೆ 50,000 ರೂ. ದೊರೆಯಲಿದೆ. ಅದರಲ್ಲಿ 25,000 ಬಡ್ಡಿರಹಿತ ನೇರ ಸಾಲ ಹಾಗೂ 25,000 ಸಹಾಯಧನ ಸಿಗಲಿದೆ.

ಗುರಿ ಮಾತ್ರ; ಸಾಧನೆ ಶೂನ್ಯ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಇನ್ನೂ ಯಾವುದೇ ರೀತಿಯಾದ ಭೌತಿಕ ಹಾಗೂ ಆರ್ಥಿಕ ಗುರಿ ಬಂದಿಲ್ಲ. 2015-16ರಲ್ಲಿ ಭೌತಿಕ 10 ಹಾಗೂ ಆರ್ಥಿಕ 2 ಲ.ರೂ. ಗುರಿಯನ್ನು ಸಾಧಿಸಿದೆ. 2016-17ರಲ್ಲಿ ಭೌತಿಕ 13 ಹಾಗೂ ಆರ್ಥಿಕ 2.60 ಲ. ರೂ. ಗುರಿ, 2017-18ರಲ್ಲಿ ಭೌತಿಕ 3 ಹಾಗೂ ಆರ್ಥಿಕ 1.50 ಲ.ರೂ.ಗುರಿಯನ್ನು ತಲುಪಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಇಲಾಖೆಯು ನಿಗಮಕ್ಕೆ ಗುರಿ ನೀಡಿದರೂ ಸಾಧನೆ ಮಾತ್ರ ಶೂನ್ಯವಾಗಿದೆ.

ಸ್ವಉದ್ಯೋಗಕ್ಕೆ ಅವಕಾಶ
ವೃತ್ತಿಯನ್ನು ಬಿಟ್ಟು ಬರುವವರಿಗೆ ಚೇತನ ಯೋಜನೆಯಡಿ ಸ್ವಉದ್ಯೋಗಕ್ಕೆ ಅವಕಾಶ ಆರಂಭಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ವೃತ್ತಿಯಿಂದ ಹೊರ ಬರಲು ಇಚ್ಛಿಸುವವರು ನೇರವಾಗಿ ಕಚೇರಿಯಿಂದ (ದೂರವಾಣಿ ಸಂಖ್ಯೆ 0820-2574978 ) ಮಾಹಿತಿ ಪಡೆಯಲು ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ಸಂಪರ್ಕಿಸ ಬಹುದಾಗಿದೆ.
-ಶೇಸಪ್ಪ ಮಹಿಳಾ ಮತ್ತು
ಮಕ್ಕಳ ಇಲಾಖೆ ಉಪನಿರ್ದೇಶಕ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next